
ಗ್ವಾಲಿಯರ್: ಬಾಂಗ್ಲಾದೇಶದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗ್ವಾಲಿಯರ್ ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 128 ರನ್ ಗುರಿಯನ್ನು ಭಾರತ ತಂಡ ಕೇವಲ 11.5 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ ಗುರಿ ತಲುಪಿತು.
ಭಾರತ ತಂಡದ ಪರ ಸಂಜು ಸ್ಯಾಮ್ಸನ್ 29 ರನ್ ಗಳಿಸಿದರೆ, ಅಭಿಷೇರ್ ಶರ್ಮಾ 16 ರನ್, ನಾಯಕ ಸೂರ್ಯ ಕುಮಾರ್ ಯಾದವ್ 29 ರನ್, ನಿತೀಶ್ ರೆಡ್ಡಿ ಅಜೇಯ 16 ರನ್ ಮತ್ತು ಹಾರ್ದಿಕ್ ಪಾಂಡ್ಯಾ ಅಜೇಯ 39 ರನ್ ಗಳಿಸಿದರು.
ಹಾರ್ದಿಕ್ ಭರ್ಜರಿ ಬ್ಯಾಟಿಂಗ್
ಇನ್ನು ಸೂರ್ಯಕುಮಾರ್ ಯಾದವ್ ವಿಕೆಟ್ ಪತನದ ಬಳಿಕ ಕ್ರೀಸ್ ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಕೇವಲ 16 ಎಸೆತಗಳಲ್ಲಿ ಹಾರ್ದಿಕ್ 2 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 39 ರನ್ ಚಚ್ಚಿ ತಂಡ ಇನ್ನೂ ವೇಗವಾಗಿ ಜಯ ದಾಖಲಿಸುವಂತೆ ಮಾಡಿದರು.
ಇನ್ನು ಬಾಂಗ್ಲಾದೇಶ ಪರ ಮುಸ್ತಫಿದುರ್ ರೆಹಮಾನ್ ಮತ್ತು ಮೆಹ್ದಿ ಹಸನ್ ಮಿರಾಜ್ ತಲಾ ಒಂದು ವಿಕೆಟ್ ಪಡೆದರು. 3 ವಿಕೆಟ್ ಪಡೆದು ಬಾಂಗ್ಲಾ ಬ್ಯಾಟರ್ ಗಳನ್ನು ಕಾಡಿದ್ದ ಭಾರತದ ಅರ್ಶ್ ದೀಪ್ ಸಿಂಗ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
Advertisement