
ನವದೆಹಲಿ: ನಿರೀಕ್ಷೆಯಂತೆಯೇ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ 222ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತುವಲ್ಲಿ ಬಾಂಗ್ಲಾದೇಶ ವಿಫಲವಾಗಿದೆ. ಬಾಂಗ್ಲಾದೇಶ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಆ ಮೂಲಕ 86 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಅಲ್ಲದೆ 3 ಪಂದ್ಯಗಳ ಟಿ20 ಸರಣಿಯನ್ನು 0-2 ಅಂತರದಲ್ಲಿ ಕೈ ಚೆಲ್ಲಿದೆ.
dew ಫ್ಯಾಕ್ಟರ್ ಹೊರತಾಗಿಯೂ ಭಾರತ ತಂಡದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು. ಭಾರತ ತಂಡದ ಬೌಲರ್ ಗಳ ಶಿಸ್ತಿನ ಬೌಲಿಂಗ್ ಪ್ರದರ್ಶನದ ಎದುರು ಬಾಂಗ್ಲಾದೇಶ ಬ್ಯಾಟರ್ ಗಳು ಮಂಕಾದರು. ಬಾಂಗ್ಲಾದೇಶ ಪರ ಮಹಮದುಲ್ಲಾ ಹೊರತುಪಡಿಸಿದರೆ ಉಳಿದಾವ ಬ್ಯಾಟರ್ ಗಳಿಂದಲೂ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ.
ಭಾರತ ತಂಡದ ಪರ ವರಣ್ ಚಕ್ರವರ್ತಿ, ನಿತೀಶ್ ರೆಡ್ಡಿ ತಲಾ 2 ವಿಕೆಟ್ ಗಳಿಸಿದರೆ, ಅರ್ಶ್ ದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ, ಮಯಾಂಕ್ ಯಾದವ್ ಮತ್ತು ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದರು.
ಮಹಮದುಲ್ಲಾ ಏಕಾಂಗಿ ಹೋರಾಟ
ಇನ್ನು ಬಾಂಗ್ಲಾದೇಶ ಪರ ಮಹಮದುಲ್ಲಾ ಏಕಾಂಗಿ ಹೋರಾಟ ನಡೆಸಿದರು. ಒಟ್ಟು 39 ಎಸೆತಗಳನ್ನು ಎದುರಿಸಿದ ಮಹಮದುಲ್ಲಾ 3 ಸಿಕ್ಸರ್ ಸಹಿತ 41 ರನ್ ಗಳಿಸಿ ಅಂತಿಮ ಓವರ್ ನಲ್ಲಿ ನಿತೀಶ್ ರೆಡ್ಡಿಗೆ ವಿಕೆಟ್ ಒಪ್ಪಿಸಿದರು.
ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ನಿತೀಶ್ ರೆಡ್ಡಿ ಮಿಂಚಿಂಗ್
ಇನ್ನು ಭಾರತ ತಂಡದ ಬ್ಯಾಟಿಂಗ್ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ನಿತೀಶ್ ರೆಡ್ಡಿ ಬಳಿಕ ಬೌಲಿಂಗ್ ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಒಟ್ಟು 4 ಓವರ್ ಎಸೆದ ನಿತೀಶ್ ರೆಡ್ಡಿ 5.80 ಸರಾಸರಿಯಲ್ಲಿ ಕೇವಲ 23 ರನ್ ನೀಡಿ 2 ವಿಕೆಟ್ ಕಬಳಿಸಿದರು.
Advertisement