ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 376ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶಕ್ಕೆ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಆಘಾತ ನೀಡಿದರು.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ 149 ರನ್ ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಪರ ನಾಯಕ ನಜ್ಮುಲ್ ಹೊಸೈನ್ ಶಾಂಟೋ 20 ರನ್ ಗಳಿಸಿ ಔಟಾದರೆ, ಶಕೀಬ್ ಹಲ್ ಹಸನ್ 32, ಲಿಟನ್ ದಾಸ್ 22 ಹಾಗೂ ಮೆಹಿದಿ ಹಸನ್ ಮಿರಾಜ್ ಅಜೇಯ 27 ರನ್ ಗಳಿಸಿದ್ದು ಪಂದ್ಯದಲ್ಲಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಭಾರತದ ಪರ ಬೌಲಿಂಗ್ ನಲ್ಲಿ ಜಸ್ ಪ್ರೀತ್ ಬುಮ್ರಾ 4, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮತ್ತು ರವಿಂದ್ರ ಜಡೇಜಾ ತಲಾ 2 ವಿಕೆಟ್ ಪಡೆದಿದ್ದಾರೆ. 227 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 81 ರನ್ ಪೇರಿಸಿದೆ. ಶುಭ್ಮನ್ ಗಿಲ್ ಅಜೇಯ 33 ಹಾಗೂ ರಿಷಬ್ ಪಂತ್ ಅಜೇಯ 12 ರನ್ ಬಾರಿಸಿ ಕಣದಲ್ಲಿದ್ದಾರೆ.
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಭಾರತ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿ, 86 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು 102 ರನ್ ಗಳಿಸಿರುವ ಅಶ್ವಿನ್ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಇಂದು ಭಾರತ 2ನೇ ದಿನದಾಟ ಮುಂದುವರೆಸಿ 376ರನ್ ಗಳಿಗೆ ಅಲೌಟ್ ಆಗಿದೆ. ಬೆಳಗ್ಗೆ ಕ್ರೀಸ್ ನಲ್ಲಿದ್ದ ಆರ್ ಅಶ್ವಿನ್ 113ರನ್ ಗಳಿಸಿ ಟಸ್ಕಿನ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರೆ, ರವೀಂದ್ರ ಜಡೇಜಾ ಇಂದು ಯಾವುದೇ ರನ್ ಕಲೆಹಾಕದೇ ಮತ್ತದೇ ಟಸ್ಕಿನ್ ಬೌಲಿಂಗ್ ನಲ್ಲಿ ಔಟ್ ಆಗಿ ಶತಕ ವಂಚಿತರಾದರು.
ಅಂತಿಮ ಹಂತದಲ್ಲಿ ಆಕಾಶ್ ದೀಪ್ 17 ರನ್, ಜಸ್ ಪ್ರೀತ್ ಬುಮ್ರಾ 7 ರನ್ ಗಳಿಗೆ ಔಟ್ ಆಗುವ ಮೂಲಕ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು. ಬಾಂಗ್ಲಾದೇಶ ಪರ ಹಸನ್ ಮಹಮೂದ್ 5 ವಿಕೆಟ್ ಪಡೆದರೆ, ಟಸ್ಕಿನ್ ಅಹ್ಮದ್ 3, ನಹೀದ್ ರಾಣಾ, ಮೆಹ್ದಿ ಹಸನ್ ತಲಾ 1 ವಿಕೆಟ್ ಪಡೆದರು.
Advertisement