ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶ ಅಭಿಮಾನಿಗೆ ಮೈದಾನದಲ್ಲೇ ಪುಂಡರ ಗ್ಯಾಂಗ್ ವೊಂದು ಮನಸೋ ಇಚ್ಛೆ ಥಳಿಸಿರುವ ಘಟನೆ ವರದಿಯಾಗಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಈ ನಡುವೆ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಘರ್ಷಣೆ ಪ್ರಕರಣ ವರದಿಯಾಗಿದ್ದು, ಪಂದ್ಯ ವೀಕ್ಷಿಸಲು ಬಂದಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅಭಿಮಾನಿಗೆ ಪುಂಡರ ಗ್ಯಾಂಗ್ ವೊಂದು ಥಳಿಸಿದೆ.
ಪಂದ್ಯ ನಡೆಯುತ್ತಿದ್ದಾಗ ಮೈದಾನದ ಆವರಣದಲ್ಲೇ ಬಾಂಗ್ಲಾದೇಶ ಕ್ರಿಕೆಟ್ ತಂಡದ ಸೂಪರ್ ಫ್ಯಾನ್ 'ಟೈಗರ್ ರಾಬಿ' (super fan' Tiger Roby)ಯನ್ನು ಪುಂಡರ ಗ್ಯಾಂಗ್ ಥಳಿಸಿದೆ. ಈ ವೇಳೆ ಥಳಿತಕ್ಕೊಳಗಾದ ರಾಬಿಯನ್ನು ಭಧ್ರತಾ ಸಿಬ್ಬಂದಿ ರಕ್ಷಿಸಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಸ್ತುತ ಹಲ್ಲೆ ಪ್ರಕರಣ ದಾಖಲಿಸಿಕೊಂಡಿರುವ ಕಾನ್ಪುರ ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ತನಿಖೆ ನಡೆಸಿದ್ದಾರೆ.
ಸಿರಾಜ್ ವಿರುದ್ಧ ಹೇಳಿಕೆ ಆರೋಪ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈತ, ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ನಿಂದಿಸುತ್ತಿದ್ದ ಎಂದು ಹೇಳಲಾಗಿದ್ದು, ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ಅಲ್ಲದೆ ಈತ ಚೆನ್ನೈನಲ್ಲೂ ಟೀಂ ಇಂಡಿಯಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಎಂಬ ಆರೋಪವೂ ಇದೆ. ಇದೇ ಕಾರಣಕ್ಕೆ ಅಭಿಮಾನಿಗಳು ಆತನನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement