ಸುಳ್ಳು ಮಾಹಿತಿ ನೀಡಿ ದೊಡ್ಡ ತಪ್ಪು ಮಾಡಿದೆ: ವಿರಾಟ್ ಕೊಹ್ಲಿ ವಿಷಯದಲ್ಲಿ ಡಿವಿಲಿಯರ್ಸ್ ಹೀಗೆಂದು ಕ್ಷಮೆ ಕೇಳಿದ್ದೇಕೆ?
ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡೆವಿಲಿಯರ್ಸ್ ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದರು.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಹೊರಗುಳಿಯಲಿದ್ದಾರೆ. ಅವರು ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೊಹ್ಲಿ ನಿಕಟ ಸ್ನೇಹಿತ ಮತ್ತು ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು.
ಆದರೆ ಇದೇ ಡಿವಿಲಿಯರ್ಸ್ ಈಗ ಯೂಟರ್ನ್ ಹೊಡೆದಿದ್ದಾರೆ. ಕೊಹ್ಲಿಯವರ ವೈಯಕ್ತಿಕ ಜೀವನದ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
'ನಾನು ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಂತೆ ಯಾರಿಗೇ ಆಗಲಿ ಕುಟುಂಬ ಮೊದಲು, ತಮ್ಮ ಕುಟುಂಬ ಸದಸ್ಯರೇ ಆದ್ಯತೆಯಾಗುತ್ತಾರೆ. ಆದರೆ ನಾನು ಈ ಹಿಂದೆ ಹೇಳಿಕೊಂಡ ವಿಷಯ ತಪ್ಪಾಗಿದೆ ಎಂದು ಹೇಳಲು ವಿಷಾದ ವ್ಯಕ್ತಪಡಿಸುತ್ತೇನೆ. ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ (Virat Kohli- Anushka Sharma) 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದೇನೆ. ಇದಕ್ಕಾಗಿ ಕ್ಷಮೆ ಇರಲಿ. ವಿರಾಟ್ ಕೊಹ್ಲಿಯವರಿಗೆ ಏನಾಗುತ್ತಿದೆ, ಏನಾಗಿದೆ ಎಂದು ಯಾರಿಗೂ ಗೊತ್ತಿಲ್ಲ, ಅವರಿಗೆ ಎಲ್ಲವೂ ಒಳಿತಾಗಲಿ ಎಂದಷ್ಟೇ ನಾನು ಹೇಳುತ್ತೇನೆ'' ಎಂದು ಡಿವಿಲಿಯರ್ಸ್ ದೈನಿಕ ಭಾಸ್ಕರ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಎಲ್ಲಾ ಸ್ಪಷ್ಟನೆ, ವದಂತಿ, ಊಹಾಪೋಹಗಳ ನಡುವೆ ಮುಂಬರುವ ರಾಜ್ ಕೋಟ್ ಮತ್ತು ರಾಂಚಿ ಟೆಸ್ಟ್ ನಿಂದ ವಿರಾಟ್ ಕೊಹ್ಲಿ ಹೊರಗುಳಿಯಲಿದ್ದಾರೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಅವರ ಬಗ್ಗೆ, ಅನುಷ್ಕಾ ಶರ್ಮ ಜೊತೆ ಎರಡನೇ ಬಾರಿ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ