
ಮುಂಬೈ: ಸೋಮವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್- ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2025 ಪಂದ್ಯದಲ್ಲಿ ರೋಹಿತ್ ಶರ್ಮಾ 13 ರನ್ ಗಳಿಸಿ ಔಟಾಗುವ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದರು.
3 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಗಳಿಸಿರುವುದು ಕೇವಲ 21 ರನ್. ಹೀಗಾಗಿ ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ಅಭಿಮಾನಿಗಳು ಹಾಗೂ ಪರಿಣಿತರು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಅವರು ಕ್ರೀಸ್‌ನಲ್ಲಿದ್ದ ಅಲ್ಪಾವಧಿಯಲ್ಲಿ ಒಂದು ಸಿಕ್ಸರ್ ಹೊಡೆದರು. ಆದರೆ ಅಂತಿಮವಾಗಿ ಆಂಡ್ರೆ ರಸೆಲ್ ಓವರ್ ನಲ್ಲಿ ಔಟಾದರು. ಅವರ ಫಾರ್ಮ್ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರವಾಗಿ ನಿರಾಸೆಗೊಂಡಿದ್ದು, MS ಧೋನಿಯೊಂದಿಗೆ ವ್ಯಾಪಕವಾಗಿ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಶ್ವನಿ ಕುಮಾರ್ ದಾಖಲೆಯ ನಾಲ್ಕು ವಿಕೆಟ್ ಮತ್ತು ರಿಯಾನ್ ರಿಕಲ್ಟನ್ ಅವರ ಅಜೇಯ 62 ರನ್ ಗಳಿಂದ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಪಂಜಾಬ್‌ನ ಝಂಜೇರಿಯ 23 ವರ್ಷದ ಅಶ್ವನಿ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದೀಪಕ್ ಚಹರ್ 2, ಟ್ರೆಂಟ್ ಬೌಲ್ಟ್ 1 ಮತ್ತು ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆಯುವುದರೊಂದಿಗೆ ಕೆಕೆಆರ್ ತಂಡವನ್ನು 16.2 ಓವರ್ ಗಳಲ್ಲಿ ಕೇವಲ 116 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ (13) ರನ್ ಗಳಿಗೆ ಔಟಾದ ಬಳಿಕ ರಿಯಾನ್ ರಿಕೆಲ್ಟನ್ (41 ಎಸೆತಗಳಲ್ಲಿ ಅಜೇಯ 62), ಸೂರ್ಯ ಕುಮಾರ್ ಯಾದವ್ 9 ಎಸೆತಗಳಲ್ಲಿ ಅಜೇಯ 27 ರನ್ ಗಳಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ವಿರುದ್ಧ ಸುಲಭ ಗೆಲುವು ದಾಖಲಿಸಿತು
Advertisement