
ಲಖನೌ: ಹಾಲಿ ಐಪಿಎಲ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಪಂಜಾಬ್ ತಂಡದ ಶ್ರೇಯಸ್ ಅಯ್ಯರ್ ಮತ್ತು ಎಲ್ ಎಸ್ ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಫೋಟೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ನಿನ್ನೆ ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್ ಎಸ್ ಜಿ ವಿರುದ್ಧ ಪಂಜಾಬ್ ಕಿಂಗ್ಸ್ 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 16.2 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ 8 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.
ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೇವಲ 30 ಎಸೆತಗಳಲ್ಲಿ 3 ಬೌಂಡರಿ, ನಾಲ್ಕು ಸಿಕ್ಸರ್ ಗಳ ನೆರವಿಂದ ಅಜೇಯ 52 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಲಕ್ನೋ ನೀಡಿದ 171ರನ್ ಗುರಿ ಎಲ್ಲಿಯೂ ಪಂಜಾಬ್ ತಂಡಕ್ಕೆ ಸವಾಲು ಎನಿಸಲೇ ಇಲ್ಲ. ಲಕ್ನೋ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ಪಂಜಾಬ್ ಬ್ಯಾಟರ್ ಗಳು ಇನ್ನೂ 3.4 ಓವರ್ ಇರುವಂತೆಯೇ ಗುರಿ ಸಾಧಿಸಿ 8 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿದರು.
ಶ್ರೇಯಸ್ ಅಯ್ಯರ್ ಅಪ್ಪಿಕೊಂಡ ಸಂಜೀವ್ ಗೋಯೆಂಕಾ
ಇನ್ನು ಪಂದ್ಯ ಮುಕ್ತಾಯದ ಬಳಿಕ ತಮ್ಮ ತಂಡಕ್ಕೆ ಕ್ಲಾಸ್ ತೆಗೆದುಕೊಂಡ ಲಕ್ಮೋ ತಂಡದ ಮಾಲೀಕ ಬಳಿಕ ನೇರವಾಗಿ ಪಂಜಾಬ್ ತಂಡದ ಶ್ರೇಯಸ್ ಅಯ್ಯರ್ ಅವರನ್ನು ತಬ್ಬಿಕೊಂಡು ಒಂದಷ್ಟು ಹೊತ್ತು ಮಾತುಕತೆ ನಡೆಸಿದರು. ಆದರೆ ಇದಕ್ಕೂ ಮೊದಲು ಇದೇ ಸಂಜೀವ್ ಗೋಯೆಂಕಾ ಅವರು ತಮ್ಮ ತಂಡದ ನಾಯಕ ರಿಷಬ್ ಪಂತ್ ಬಳಿ ತುಂಬಾ ಗಂಭೀರವಾಗಿ ಚರ್ಚೆಸುತ್ತಿದ್ದರು. ಇದು ಈ ಹಿಂದೆ ಇದೇ ಸಂಜೀವ್ ಗೋಯೆಂಕಾ ಅವರು ಅಂದಿನ ತಂಡದ ನಾಯಕ ಕೆಎಲ್ ರಾಹುಲ್ ಬಳಿ ಮಾತನಾಡಿದ್ದ ಘಟನೆಯನ್ನು ನೆನಪಿಸುವಂತಿತ್ತು.
Advertisement