
ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲು ಕಂಡಿದೆ. ಎಸ್ಆರ್‌ಎಚ್ ಸೋಲು ಕಂಡಿದ್ದರೂ, ಫ್ರಾಂಚೈಸಿಯ ಬೌಲರ್ ಕಮಿಂಡು ಮೆಂಡಿಸ್ ಈ ಲೀಗ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎರಡೂ ಕೈಗಳಿಂದ ಬೌಲಿಂಗ್ ಮಾಡಿ ಒಂದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಶ್ರೀಲಂಕಾದವರಾದ ಕಮಿಂದು ಎಡಗೈ ಸ್ಪಿನ್ ಮತ್ತು ಬಲಗೈ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯದಿಂದ ಖ್ಯಾತಿ ಗಳಿಸಿದ್ದಾರೆ. ಗುರುವಾರ ಕೆಕೆಆರ್ ವಿರುದ್ಧ ಬೌಲಿಂಗ್ ಮಾಡಿದ ಒಂದೇ ಓವರ್‌ನಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಐಪಿಎಲ್ ಅಭಿಮಾನಿಗಳು ಮತ್ತು ವೀಕ್ಷಕ ವಿವರಣೆಗಾರರನ್ನು ಬೆರಗುಗೊಳಿಸಿದರು. ಅಂಗ್‌ಕ್ರಿಶ್ ರಘುವಂಶಿ ವಿರುದ್ಧ ಎಡಗೈಯಿಂದ ಬೌಲಿಂಗ್ ಮಾಡಿದ ನಂತರ, ಅದೇ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್ ವಿರುದ್ಧ ಬಲಗೈಯಿಂದ ಬೌಲಿಂಗ್ ಮಾಡಿದರು. ಈ ಮೂಲಕ ರಘುವಂಶಿ ಅವರ ವಿಕೆಟ್ ಪಡೆದು ಮಿಂಚಿದರು.
ಆ ಓವರ್ ಸಮಯದಲ್ಲಿ ಪ್ರಭಾವಿತರಾದ ಜಿಂಬಾಬ್ವೆಯ ಮಾಜಿ ಆಟಗಾರ ಪೊಮ್ಮಿ ಎಂಬಾಂಗ್ವಾ, 'ಅವರು ಎರಡೂ ಕೈಗಳಿಂದ ನಿಖರವಾಗಿ ಬೌಲಿಂಗ್ ಮಾಡಿದರು. ಆದರೆ, ಬ್ಯಾಟ್ಸ್‌ಮನ್‌ಗೆ ಇದು ಗೊಂದಲಮಯವಾಗಿದೆ, ಅಲ್ಲವೇ?' ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಮಿಂದು ಮೆಂಡಿಸ್ ಭಾರತದ ವಿರುದ್ಧವೇ ಈ ರೀತಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. 2024ರಲ್ಲಿ ಭಾರತದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ, ರಿಷಭ್ ಪಂತ್ ಅವರಿಗೆ ಆಫ್-ಸ್ಪಿನ್ ಮತ್ತು ಸೂರ್ಯಕುಮಾರ್ ಯಾದವ್‌ಗೆ ಎಡಗೈ ಸ್ಪಿನ್ ಬೌಲಿಂಗ್ ಮಾಡಿದ್ದರು.
ನವೆಂಬರ್‌ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಶ್ರೀಲಂಕಾದ ಆಲ್‌ರೌಂಡರ್ ಅನ್ನು 75 ಲಕ್ಷ ರೂಪಾಯಿಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತು. ಐಪಿಎಲ್ ಆವೃತ್ತಿಗೆ ಮುನ್ನ, ಅವರು ತಮ್ಮ ದೀರ್ಘಕಾಲದ ಗೆಳತಿ ನಿಷ್ಣಿಯಾರನ್ನು ವಿವಾಹವಾದರು. ಟಿ20 ಪಂದ್ಯಾವಳಿಗಾಗಿ ಭಾರತಕ್ಕೆ ಪ್ರಯಾಣಿಸಲು ತಮ್ಮ ಹನಿಮೂನ್ ಅನ್ನು ರದ್ದುಗೊಳಿಸಿದರು.
Advertisement