
ಬೇ ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಮುಜುಗರ ಎದುರಾಗಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಅಭಿಮಾನಿಯನ್ನೇ ಥಳಿಸಲು ಹೋಗಿ ಇದೀಗ ಜಾಗತಿಕ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಟಿ20 ಸರಣಿ ಸೋಲು ಬೆನ್ನಲ್ಲೇ ಇದೀಗ ಏಕದಿನ ಸರಣಿಯಲ್ಲೂ ವೈಟ್ ವಾಶ್ ಸರಣಿ ಸೋಲು ಕಂಡಿದೆ. ಇಂದು ಮುಕ್ತಾಯವಾದ ಮೂರನೇ ಏಕದಿನ ಪಂದ್ಯದಲ್ಲೂ ಪಾಕಿಸ್ತಾನ ಕ್ರಿಕೆಟ್ ತಂಡ 43 ರನ್ಗಳ ಅಂತರದ ಹೀನಾಯ ಸೋಲುಕಂಡಿದೆ. ಆ ಮೂಲಕ ಏಕದಿನ ಸರಣಿಯಲ್ಲಿ ಮತ್ತೆ ವೈಟ್ ವಾಶ್ ಆಗಿದೆ.
ನ್ಯೂಜಿಲೆಂಡ್ ಎ ಆಟಗಾರರ ವಿರುದ್ಧವೇ ಹೀನಾಯ ಪ್ರದರ್ಶನ
ಇನ್ನು ಐಪಿಎಲ್ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರು ಭಾರತದಲ್ಲಿ ಚಟುಕು ಕ್ರಿಕೆಟ್ ಟೂರ್ನಿಯಲ್ಲಿ ಬಿಸಿಯಾಗಿದ್ದಾರೆ. ನ್ಯೂಜಿಲೆಂಡ್ ಸ್ಟಾರ್ ಆಟಗಾರರಾದ ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಡೆವೊನ್ ಕಾನ್ವೆ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ವಿಲ್ ಯಂಗ್, ಇಶ್ ಸೋಧಿ, ಲಾಕಿ ಫರ್ಗುಸನ್, ಗ್ಲೆನ್ ಫಿಲಿಪ್ಸ್ ಮತ್ತು ಮ್ಯಾಟ್ ಹೆನ್ರಿ ಐಪಿಎಲ್ ನಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.
ಹೀಗಾಗಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ನ ಯುವ ಆಟಗಾರರು ಭಾಗಿಯಾಗಿದ್ದು, ಈ ಅನನುಭವಿ ಆಟಗಾರರ ವಿರುದ್ಧವೂ ಪಾಕಿಸ್ತಾನ ಅನುಭವಿ ತಂಡ ಸೋತು ಸುಣ್ಣವಾಗಿದೆ. ಮೊದಲು 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಸೋತಿದ್ದ ಪಾಕಿಸ್ತಾನ ಬಳಿಕ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನೂ 3-0 ಅಂತರದಲ್ಲಿ ಕಳೆದುಕೊಂಡಿದೆ.
ಕೆಣಕಿದ ಅಭಿಮಾನಿ. ಥಳಿಸಲು ಮುಂದಾದ ಪಾಕ್ ಕ್ರಿಕೆಟಿಗ
ಇನ್ನು ಇಂದಿನ ಪಂದ್ಯ ಮುಕ್ತಾಯದ ಬಳಿಕ ಪಾಕಿಸ್ತಾನ ಕ್ರಿಕೆಟಗರು ಮತ್ತು ಅಭಿಮಾನಿಗಳ ನಡುವೆ ದೊಡ್ಡ ಸಂಘರ್ಷವೇ ನಡೆದಿದೆ. ಪಾಕಿಸ್ತಾನ ತಂಡ ಸೋತ ರೀತಿಯನ್ನು ಮೈದಾನದಲ್ಲಿದ್ದ ಅಭಿಮಾನಿಗಳು ಹೀನಾಯವಾಗಿ ಟೀಕಿಸಿದ್ದಾರೆ. ಮೈದಾನದಲ್ಲಿದ್ದ ಕೆಲ ಅಭಿಮಾನಿಗಳು ವೈಯುಕ್ತಿಕವಾಗಿ ಪಾಕಿಸ್ತಾನ ಮತ್ತು ಪಾಕ್ ಕ್ರಿಕೆಟಿಗರನ್ನು ಟೀಕಿಸಿದ್ದು, ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ಆಲ್ರೌಂಡರ್ ಕುಶ್ ದಿಲ್ ಶಾ ಅಭಿಮಾನಿಯೋರ್ವನಿಗೆ ಥಳಿಸಲು ಮುಂದಾಗಿದ್ದಾರೆ.
ಕುಶ್ ದಿಲ್ ಶಾ ಆಕ್ರೋಶ
ಪೆವಿಲಿಯನ್ ನಲ್ಲಿದ್ದ ಅಭಿಮಾನಿಯೋರ್ವ ಬೌಂಡರಿ ಬಳಿ ಇದ್ದ ಕುಶ್ ದಿಲ್ ಶಾ ಮತ್ತು ಇತರೆ ಆಟಗಾರರನ್ನು ಗುರಿಯಾಗಿಸಿಕೊಂಡು ನಿಂದಿಸಿದ್ದಾರೆ. ಈ ವೇಳೆ ಕುಶ್ ದಿಲ್ ಶಾ ಕೂಡ ಅವರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಕುಶ್ ದಿಲ್ ಶಾ ನೇರವಾಗಿ ಪೆವಿಲಿಯನ್ ನತ್ತ ಹೋಗಿ ಅಭಿಮಾನಿಗೆ ಥಳಿಸಲು ಮುಂದಾಗಿದ್ದಾರೆ. ಆದರೆ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಕುಶ್ ದಿಲ್ ಶಾರನ್ನು ತಡೆದಿದ್ದಾರೆ. ಅಲ್ಲದೆ ಪದೇ ಪದೇ ಟೀಕಿಸುತ್ತಿದ್ದ ಅಭಿಮಾನಿಗಳನ್ನು ಕ್ರೀಡಾಂಗಣದಿಂದ ಹೊರ ಕಳುಹಿಸಿದ್ದಾರೆ.
ಆಫ್ಘನ್ ಅಭಿಮಾನಿಗಳ ಕೃತ್ಯ; ಪಿಸಿಬಿ ಸ್ಪಷ್ಟನೆ
ಇನ್ನು ಈ ಘಟನೆಗೆ ಆಫ್ಘಾನಿಸ್ತಾನ ಅಭಿಮಾನಿಗಳ ಕೀಟಲೆಯೇ ಕಾರಣ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರೋಪಿಸಿದೆ. ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಿಸಿಬಿ, ಮೈದಾನದಲ್ಲಿದ್ದ ಆಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಆಟಗಾರರನ್ನು ಗುರಿಯಾಗಿಸಿಕೊಂಡು ಕೆಳಮಟ್ಟದ ಟೀಕೆ ಮಾಡಿದ್ದಾರೆ. ಇದರಿಂದ ಕುಶ್ ದಿಲ್ ಶಾ ತಾಳ್ಮೆ ಕಳೆದುಕೊಂಡು ಆಕ್ರೋಶಭರಿತರಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದೆ.
"ಪಾಕಿಸ್ತಾನ ಕ್ರಿಕೆಟ್ ತಂಡದ ಆಡಳಿತ ಮಂಡಳಿಯು ವಿದೇಶಿ ಪ್ರೇಕ್ಷಕರು ನಮ್ಮ ರಾಷ್ಟ್ರೀಯ ಆಟಗಾರರ ವಿರುದ್ಧ ನಿಂದನೀಯ ಭಾಷಾ ಬಳಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಇಂದಿನ ಪಂದ್ಯದ ಸಮಯದಲ್ಲಿ, ವಿದೇಶಿ ಪ್ರೇಕ್ಷಕರು ಮೈದಾನದಲ್ಲಿದ್ದ ಕ್ರಿಕೆಟಿಗರ ಮೇಲೆ ಅನುಚಿತ ಟೀಕೆಗಳನ್ನು ಮಾಡಿದರು.
ಪಾಕಿಸ್ತಾನ ವಿರೋಧಿ ಘೋಷಣೆಗಳು ಕೇಳಿಬಂದಾಗ, ಕ್ರಿಕೆಟಿಗ ಖುಷ್ದಿಲ್ ಶಾ ಮಧ್ಯೆ ಪ್ರವೇಶಿಸಿ ಪ್ರೇಕ್ಷಕರನ್ನು ಪಂದ್ಯದಿಂದ ದೂರವಿರುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಫ್ಘಾನ್ ಪ್ರೇಕ್ಷಕರು ಮತ್ತಷ್ಟು ಅನುಚಿತ ಭಾಷೆಯನ್ನು ಬಳಸುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರು. ಪಾಕಿಸ್ತಾನ ತಂಡದ ದೂರಿನ ನಂತರ, ಕ್ರೀಡಾಂಗಣದ ಅಧಿಕಾರಿಗಳು ಮಧ್ಯಪ್ರವೇಶಿಸಿ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದರು" ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
Advertisement