
ಮುಂಬೈ: ವಾಣಿಜ್ಯ ನಗರಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್ ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ 5 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 32 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಐದು ಬೌಂಡರಿ ಸೇರಿದಂತೆ 64 ರನ್ ಪೇರಿಸಿದರು.
ಇನ್ನು ವಿರಾಟ್ ಕೊಹ್ಲಿ ಸಹ ಈ ಪಂದ್ಯದಲ್ಲಿ ಆರ್ಭಟಿಸಿದ್ದು 42 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿ ಸೇರಿದಂತೆ 67 ರನ್ ಬಾರಿಸಿದರು. ಇನ್ನು ದೇವದತ್ ಪಡಿಕ್ಕಲ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 22 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸೇರಿದಂತೆ 37 ರನ್ ಬಾರಿಸಿ ಔಟಾದರು.
ಜಿತೇಶ್ ಶರ್ಮಾ ಸಹ ಇಂದು ಮುಂಬೈ ಬೌಲರ್ ಗಳನ್ನು ದಂಡಿಸಿದರು. 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ ಅಜೇಯ 40 ರನ್ ಬಾರಿಸಿದರು. ಮುಂಬೈ ಪರ ಹಾರ್ದಿಕ್ ಪಾಂಡ್ಯ ಮತ್ತು ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದರೆ ವಿಘ್ನೇಶ್ ಪುತುರ್ 1 ವಿಕೆಟ್ ಗಳಿಸಿದರು.
MI 9 ವಿಕೆಟ್ ಗಳಿಗೆ 209 ರನ್ : ಆರ್ ಸಿಬಿ ನೀಡಿದ 222 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 17 ರನ್ ಗಳಿಸಿ ಯಶ್ ದಯಾಳ್ ಬೌಲಿಂಗ್ ನಲ್ಲಿ ಔಟಾದರು. ರಿಯಾನ್ ರಿಕೆಲ್ಟನ್ 17, ವಿಲ್ ಜಾಕ್ಸ್ 22, ಸೂರ್ಯ ಕುಮಾರ್ ಯಾದವ್ 28, ತಿಲಕ್ ವರ್ಮಾ 56 ರನ್ ಗಳಿಸುವ ಮೂಲಕ ರನ್ ವೇಗ ಹೆಚ್ಚಿಸುವಲ್ಲಿ ನೆರವಾದರು.
ನಾಯಕ ಹಾರ್ದಿಕ್ ಪಾಂಡ್ಯ 42 ರನ್ ಗಳಿಸಿದಾಗ ಲಿವಿಂಗ್ ಸ್ಟೋನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಆರ್ ಸಿಬಿ ಗೆಲುವಿನ ಹಾದಿ ಸುಗಮವಾಯಿತು. ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಆರ್ ಸಿಬಿ 12 ರನ್ ಗಳಿಂದ ಗೆಲುವಿನ ನಗೆ ಬೀರಿತು.
ಆರ್ ಸಿಬಿ ಪರ ಬೌಲರ್ ಯಶ್ ದಯಾಳ್ 2, ಜೋಶ್ ಹ್ಯಾಜಲ್ ವುಡ್ 3 ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.
Advertisement