
ಮೊಹಾಲಿ: ಚಂಡೀಗಢದ ಮೊಹಾಲಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ನ್ನು 18 ರನ್ ಗಳಿಂದ ಸೋಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 39 ಎಸೆತಗಳಲ್ಲಿ ಶತಕ ಗಳಿಸಿದರು. ಇದರೊಂದಿಗೆ ಪ್ರಿಯಾಂಶ್ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಜಂಟಿ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಚೆನ್ನೈ ವಿರುದ್ಧ ಪ್ರಿಯಾಂಶ್ ಆರ್ಯ ಬ್ಯಾಟ್ ಅಬ್ಬರಿಸಿದರು. ಅವರು ಕೇವಲ 39 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಗಳಿಸಿದರು. ಇದು ಪ್ರಿಯಾಂಶ್ ಅವರ ಐಪಿಎಲ್‌ನಲ್ಲಿ ಮೊದಲ ಶತಕವಾಗಿದೆ. ಅವರು 42 ಎಸೆತಗಳಲ್ಲಿ 103 ರನ್ ಗಳಿಸಿ ಔಟಾದರು.
ಎಡಗೈ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಅವರೊಂದಿಗೆ ಆರನೇ ವಿಕೆಟ್‌ಗೆ 71 ರನ್ ಜೊತೆಯಾಟವಾಡಿದರು. ಉಳಿದಂತೆ ಮಾರ್ಕೋ ಜಾನ್ಸೆನ್ 34 ರನ್ ಗಳಿಸಿದ್ದು ಹೊರತು ಪಡಿಸಿದರೆ ಬೇರೆ ಯಾವುದೇ ಆಟಗಾರರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲುವಲ್ಲಿ ವಿಫಲರಾದರು. ಇದರಿಂದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 219 ರನ್ ಗಳಿಸಿತು.
ಪಂಜಾಬ್ ಕಿಂಗ್ಸ್ ನೀಡಿದ 220 ರನ್ ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ರಚಿನ್ ರವೀಂದ್ರ 36, ಡೆವೊನ್ ಕಾನ್ವೇ 69, ಶಿವಂ ದುಬೆ 42, ಮಹೇಂದ್ರ ಸಿಂಗ್ ಧೋನಿ 27 ರನ್ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಎರಡಂಕಿ ದಾಟಲಿಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವ ಮೂಲಕ ಮತ್ತೊಂದು ಸೋಲಿಗೆ ಶರಣಾಯಿತು.
Advertisement