
ಅಹ್ಮದಾಬಾದ್: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ ಭರ್ಜರಿ ಜಯ ದಾಖಲಿಸಿದೆ.
ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನೀಡಿದ 218ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ರಾಜಸ್ತಾನ ತಂಡ 19.2 ಓವರ್ ನಲ್ಲಿ 159ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು ಆ ಮೂಲಕ 58 ರನ್ ಗಳ ಅಂತರದಲ್ಲಿ ಹೀನಾಯ ಸೋಲು ದಾಖಲಿಸಿತು.
ಗುಜರಾತ್ ಬೃಹತ್ ಮೊತ್ತ
ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರಂತೆ ಗುಜರಾತ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಸಾಯಿ ಸುದರ್ಶನ್ (82) ಜಾಸ್ ಬಟ್ಲರ್ (36) ಮತ್ತು ಶಾರುಖ್ ಖಾನ್ (36)ರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 217ರನ್ ಕಲೆಹಾಕಿತು. ಆ ಮೂಲಕ ರಾಜಸ್ತಾನಕ್ಕೆ ಗೆಲ್ಲಲು 218ರನ್ ಗಳ ಬೃಹತ್ ಗುರಿ ನೀಡಿತು.
ಗುಜರಾತ್ ನೀಡಿದ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ರಾಜಸ್ತಾನ ತಂಡ 19.2 ಓವರ್ ನಲ್ಲಿ 159ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು ಆ ಮೂಲಕ 58 ರನ್ ಗಳ ಅಂತರದಲ್ಲಿ ಹೀನಾಯ ಸೋಲು ದಾಖಲಿಸಿತು. ರಾಜಸ್ತಾನ ಪರ ಶಿಮ್ರಾನ್ ಹೇಟ್ಮಯರ್ (52 ರನ್) ಅರ್ಧಶತಕ ಮತ್ತು ನಾಯಕ ಸಂಜು ಸ್ಯಾಮ್ಸನ್ (41 ರನ್) ತೀವ್ರ ಹೋರಾಟ ನೀಡಿದರಾದರೂ ಉಳಿದ ಆಟಗಾರರಿಂದ ಉತ್ತಮ ಸಾಥ್ ದೊರೆಯಲಿಲ್ಲ.
ಕನ್ನಡಿಗ ಪ್ರಸಿದ್ಧ ಕೃಷ್ಣಗೆ 3 ವಿಕೆಟ್
ಇನ್ನು ಗುಜರಾತ್ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ 3 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ ಮತ್ತು ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಸಿರಾಜ್, ಅರ್ಶದ್ ಖಾನ್, ಕುಲ್ವಂತ್ ಖೆಜ್ರೋಲಿಯಾ ತಲಾ 1 ವಿಕೆಟ್ ಪಡೆದರು.
Advertisement