
ಚೆನ್ನೈ: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್ 2025 ಟೂರ್ನಿಯ 25 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೆಕೆಆರ್ 8 ವಿಕೆಟ್ ಗಳಿಂದ ಮಣಿಸಿದೆ. ಈ ಮೂಲಕ ಸೋಲಿನ ಸುಳಿಯಿಂದ ಹೊರಬಾರದ CKS ತವರಿನಲ್ಲೇ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಕೆಕೆಆರ್ ಮಾರಕ ಬೌಲಿಂಗ್ ನಿಂದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಅತಿ ಕಡಿಮೆ 103 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ಆಟಗಾರರಾದ ರಚಿನ್ ರವೀಂದ್ರ ಕೇವಲ 4 ರನ್ ಗಳಿಸಿ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ರಹಾನೆಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ಡೆವೋನ್ ಕಾನ್ವೆ 12 ರನ್ ಗಳಿಸಿ ಎಲ್ ಬಿಡಬ್ಲೂಗೆ ಬಲಿಯಾದರು. ಬಳಿಕ ಜೊತೆಯಾದ ರಾಹುಲ್ ತ್ರಿಪಾಠಿ 16, ವಿಜಯ್ ಶಂಕರ್ 29, ಶಿವಂದುಬೆ 31 ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು 5ಕ್ಕಿಂತ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.
ಮಹೇಂದ್ರ ಸಿಂಗ್ ಧೋನಿ ಕೇವಲ 1 ರನ್ ಗಳಿಸಿ ಎಲ್ ಬಿಡಬ್ಲೂಗೆ ಔಟಾದರು. ಕೆಕೆಆರ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಸುನೀಲ್ ನರೈನ್ 3 ವಿಕೆಟ್ ಕಬಳಿಸಿದರೆ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ತಲಾ 2 ವಿಕೆಟ್, ಮೊಯಿನ್ ಆಲಿ, ವೈಭವ್ ಅರೋರಾ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಕೇವಲ 104 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕೆಕೆಆರ್ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾರ್ 23, ಸುನಿಲ್ ನರೈನ್ 44, ನಾಯಕ ಅಜಿಂಕ್ಯಾ ರಹಾನೆ 20, ರಿಂಕ್ ಸಿಂಗ್ 15 ರನ್ ಗಳಿಸುವ ಮೂಲಕ 10.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 107 ರನ್ ಗಳಿಸುವುದರೊಂದಿಗೆ ಕೆಕೆಆರ್ ಗೆಲುವಿನ ನಗೆ ಬೀರಿತು. ಸುನೀಲ್ ನರೈನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
Advertisement