
ಬೆಂಗಳೂರು: ಐಪಿಎಲ್ ಟೂರ್ನಿಯ ನಿನ್ನೆಯ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್ ರ ವಿನ್ನಿಂಗ್ ಸೆಲೆಬ್ರೇಷನ್ ವ್ಯಾಪಕ ವೈರಲ್ ಆಗುತ್ತಿರುವಂತೆಯೇ ಇದೀಗ ಆ ಸೆಲೆಬ್ರೇಷನ್ ಹಿನ್ನಲೆಯನ್ನು ಸ್ವತಃ ರಾಹುಲ್ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಫಿಲ್ ಸಾಲ್ಟ್ ಶ್(37) ಮತ್ತು ಟಿಮ್ ಡೇವಿಡ್ (37) ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 93 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 17.5 ಓವರ್ ನಲ್ಲೇ 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.
ವೃತ್ತ ಬರೆದು ನನ್ನ ಗ್ರೌಂಡ್ ಎಂದಿದ್ದ ರಾಹುಲ್
ಪಂದ್ಯದಲ್ಲಿ ವಿನ್ನಿಂಗ್ ಶಾಟ್ ಭಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟ ಕೆಎಲ್ ರಾಹುಲ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಭಾವುಕರಾಗಿಯೇ ಸಂಭ್ರಮಿಸಿದರು. ಮೈದಾನದಲ್ಲಿ ಬ್ಯಾಟ್ ಮೂಲಕ ವೃತ್ತ ರಚಿಸಿ 'ಇದು ನನ್ನ ಗ್ರೌಂಡ್..' ಎನ್ನುವ ರೀತಿಯಲ್ಲಿ ಸನ್ಹೆ ಮಾಡಿ ತೋರಿಸಿದರು. ರಾಹುಲ್ ರ ಈ ವಿನ್ನಿಂಗ್ ಸೆಲೆಬ್ರೇಷನ್ ವ್ಯಾಪಕ ವೈರಲ್ ಆಗಿತ್ತು.
ಸೆಲೆಬ್ರೇಷನ್ ಹಿನ್ನಲೆ ಹೇಳಿದ ರಾಹುಲ್
ಇನ್ನು ತಮ್ಮ ಅಕ್ರಮಣಕಾರಿ ಮತ್ತು ಭಾವುಕ ಸೆಲೆಬ್ರೇಷನ್ ಕುರಿತು ಪಂದ್ಯದ ಬಳಿಕ ಮಾತನಾಡಿರುವ ಕೆಎಲ್ ರಾಹುಲ್, ಇದು ನನ್ನ ಸೆಲೆಬ್ರೇಷನ್ ಅಲ್ಲ.. ನನ್ನ ಫೇವರಿಟ್ ಚಿತ್ರ ಕಾಂತಾರಾದಲ್ಲಿ ಬರುವ ಒಂದು ಸನ್ನಿವೇಶದ್ದು ಎಂದು ಹೇಳಿದ್ದಾರೆ. ಚಿತ್ರಗಳಲ್ಲಿ ನನಗೆ ಕಾಂತಾರಾ ಫೇವರಿಟ್ ಚಿತ್ರವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ನನ್ನ ವಿಶೇಷ ಸ್ಥಳವಾಗಿದೆ. ಹೀಗಾಗಿ ಅಲ್ಲಿ ನನ್ನ ಉತ್ತಮ ಪ್ರದರ್ಶನ ವಿಶೇಷವಾಗಿದೆ. ಈ ಸ್ಥಳ ಎಷ್ಟು ವಿಶೇಷ ಎಂಬುದನ್ನು ತೋರಿಸಲು ನಾನು ಆ ರೀತಿ ಸೆಲೆಬ್ರೇಟ್ ಮಾಡಿದೆ. ಇದು ನಾನು ಆಡಿ ಬೆಳೆದ ವಿಶೇಷ ಸ್ಥಳ. ಇದು ನನ್ನ ಗ್ರೌಂಡ್ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
Advertisement