
ಬೆಂಗಳೂರು: ಐಪಿಎಲ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದ ಹಲವು ನಾಟಕೀಯ ಸನ್ನಿವೇಶಗಳಿಗೆ ವೇದಿಕೆಯಾಗಿತ್ತು.
ಹೌದು.. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು. ಆರ್ ಸಿಬಿ ನೀಡಿದ 164 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 93) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆದ್ದು ಬೀಗಿತು. ಡೆಲ್ಲಿ ಕೇವಲ 17.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಭರ್ಜರಿ ಆರಂಭದ ಹೊರತಾಗಿಯೂ ಆರ್ ಸಿಬಿ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು. ಅಂತೆಯೇ ಆರ್ ಸಿಬಿ ನೀಡಿದ ಸವಾಲಿನ ಗುರಿಯನ್ನು ಮುಟ್ಟಲು ಡೆಲ್ಲಿ ಕೂಡ ಆರಂಭದಲ್ಲಿ ಪರದಾಡಿತು. ಕೇವಲ 58 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿಗೆ ಕನ್ನಡಿಗ ಕೆಎಲ್ ರಾಹುಲ್ ನೆರವಾದರು. ಅವರಿಗೆ ಕೆಳ ಕ್ರಮಾಂಕದಲ್ಲಿ ಸ್ಟಬ್ಸ್ ಉತ್ತಮ ಸಾಥ್ ನೀಡಿದರು.
ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್
ಇನ್ನು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನೆರವಾದ ಕೆಎಲ್ ರಾಹುಲ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರಾದರೂ, ಬಳಿಕ ಲಯ ಕಂಡುಕೊಂಡು ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು. ರಾಹುಲ್ ಗೆ ಉತ್ತಮ ಸಾಥ್ ನೀಡಿದ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.
'ಇದು ನನ್ನ ಗ್ರೌಂಡ್'
ಇನ್ನು ವಿನ್ನಿಂಗ್ ಶಾಟ್ ಭಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟ ಕೆಎಲ್ ರಾಹುಲ್ RCB ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಭಾವುಕರಾಗಿಯೇ ಸಂಭ್ರಮಿಸಿದರು. ಮೈದಾನದಲ್ಲಿ ಬ್ಯಾಟ್ ಮೂಲಕ ವೃತ್ತ ರಚಿಸಿ 'ಇದು ನನ್ನ ಗ್ರೌಂಡ್.. ಇಲ್ಲಿ ನಾನೇ ಕಿಂಗ್' ಎನ್ನುವ ರೀತಿಯಲ್ಲಿ ಸನ್ಹೆ ಮಾಡಿ ತೋರಿಸಿದರು. ಅಲ್ಲದೆ ಆರ್ ಸಿಬಿ ತಂಡಕ್ಕೆ ತಮ್ಮನ್ನು ಸೇರಿಸಿಕೊಳ್ಳದ ಫ್ರಾಂಚೈಸಿ ವಿರುದ್ಧವೂ ಕೆಎಲ್ ರಾಹುಲ್ ಈ ಮೂಲಕ ಪರೋಕ್ಷ ಅಸಮಾಧಾನ ತೋರಿದರು ಎನ್ನಲಾಗಿದೆ.
ಈ ಹಿಂದೆ ಆರ್ ಸಿಬಿ ಭಾಗವೇ ಆಗಿದ್ದ ಕೆಎಲ್ ರಾಹುಲ್ ರನ್ನು ಫ್ರಾಂಚೈಸಿ ಕೈಬಿಟ್ಟಿತ್ತು. ಅಲ್ಲದೆ ಕಳೆದ ಆಟಗಾರರ ಹರಾಜು ಪ್ರಕ್ರಿಯೆ ಸಂದರ್ಭದಲ್ಲೂ ಅಭಿಮಾನಿಗಳು ಈ ಬಾರಿ ಕೆಎಲ್ ರಾಹುಲ್ ತಂಡಕ್ಕೆ ಮರಳಲಿದ್ದಾರೆ ಎಂದು ಭಾವಿಸಿದ್ದರು. ಇದಕ್ಕೆ ಇಂಬು ನೀಡುವಂತೆ ಕಳೆದ ಬಾರಿಯ ಐಪಿಎಲ್ ನಲ್ಲಿ ಎಲ್ ಎಸ್ ಜಿ ಪರ ಆಡಿದ್ದ ರಾಹುಲ್ ರನ್ನು ಲಕ್ನೋ ಫ್ರಾಂಚೈಸಿ ನಡೆಸಿಕೊಂಡ ರೀತಿ ಆರ್ ಸಿಬಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿತ್ತು. ಹೀಗಾಗಿ ಈ ಬಾರಿ ರಾಹುಲ್ ಆರ್ ಸಿಬಿ ಪರ ಆಡುತ್ತಾರೆ ಎಂದು ಭಾವಿಸಿದ್ದರು. ಆದರೆ ಆರ್ ಸಿಬಿ ಫ್ರಾಂಚೈಸಿಯ ಬದಲಿಗೆ ರಾಹುಲ್ ಡೆಲ್ಲಿ ಪಾಲಾಗಿದ್ದರು.
Advertisement