KKR ವಿರುದ್ಧ CKS ಹೀನಾಯ ಸೋಲು: ತನ್ನ ಸಹ ಆಟಗಾರನನ್ನು 'ವಂಚಕ' ಎಂದು ಕರೆದ MS Dhoni, ವಿಡಿಯೋ ವೈರಲ್!
ಐಪಿಎಲ್ 2025ರಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮುನ್ನಡೆಸುತ್ತಿದ್ದಾರೆ. ಕಾರಣ ತಂಡದ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಮೊಣಕೈ ಗಾಯದಿಂದಾಗಿ ಐಪಿಎಲ್‌ನಿಂದ ಹೊರಗುಳಿದಿರುವುದು. ಆದರೆ, ಧೋನಿ ನಾಯಕತ್ವದಲ್ಲಿ ಆಡಿದ ಮೊದಲ ಪಂದ್ಯ ನಿರಾಶಾದಾಯಕವಾಗಿತ್ತು. ಶುಕ್ರವಾರ ಕೆಕೆಆರ್ ತಂಡ ಸಿಎಸ್‌ಕೆ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಚೆಪಾಕ್‌ನಲ್ಲಿ ಅವರ ಅತ್ಯಂತ ಕಡಿಮೆ ಮೊತ್ತವಾಗಿತ್ತು. ಕೆಕೆಆರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತು. ಗೆಲ್ಲಲು 104 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 10.1 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಜಯ ಸಾಧಿಸಿತು.
ಈ ಪಂದ್ಯಕ್ಕೂ ಮುನ್ನ ಧೋನಿ ನೀಡಿದ ಹೇಳಿಕೆ ಈಗ ಚರ್ಚೆಯ ವಿಷಯವಾಗಿದೆ. ಈ ವೇಳೆ ತನ್ನ ಮಾಜಿ ಸಹ ಆಟಗಾರನನ್ನು ವಂಚಕ ಎಂದು ಕರೆಯುವ ಮೂಲಕ ಧೋನಿ, ಬ್ರಾವೊ ಅವರ ಕಾಲೆಳೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರುತುರಾಜ್ ಗಾಯಗೊಂಡಿದ್ದರಿಂದ "ನಮ್ಮಲ್ಲಿ ಹೊಸ ಆಟಗಾರ ಎಂಎಸ್ ಧೋನಿ ಇದ್ದಾರೆ, ಅವರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ನಾಯಕರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ" ಎಂದು ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾಧ್ಯಮಗಳಿಗೆ ತಿಳಿಸಿದರು. 2008ರಿಂದ 2023ರವರೆಗೆ CSK ತಂಡದ ನಾಯಕತ್ವ ವಹಿಸಿ ಐದು ಐಪಿಎಲ್ ಪ್ರಶಸ್ತಿಗಳಿಗೆ ಕಾರಣರಾದ ಧೋನಿ, 2024ರ ಋತುವಿಗೆ ಮುಂಚಿತವಾಗಿ ಗಾಯಕ್ವಾಡ್ ಅವರಿಗೆ ನಾಯಕತ್ವ ವಹಿಸಿದ್ದರು.
ವಾಸ್ತವವಾಗಿ, ಕೆಕೆಆರ್ ಜೊತೆಗಿನ ಪಂದ್ಯಕ್ಕೂ ಮೊದಲು, ಧೋನಿ ಚೆಪಾಕ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿತ್ತು. ಈ ಸಮಯದಲ್ಲಿ, ಅವರ ಮಾಜಿ CSK ತಂಡದ ಸಹ ಆಟಗಾರ ಡ್ವೇನ್ ಬ್ರಾವೋ ಅಲ್ಲಿಗೆ ಹೋಗಿದ್ದರು. ಅವರು ಈಗ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾರ್ಗದರ್ಶಕರಾಗಿದ್ದಾರೆ. ಬ್ರಾವೋ ಅವರನ್ನು ನೋಡಿದ ಧೋನಿ, "ಆ ವಂಚಕ ಇಲ್ಲಿದ್ದಾನೆ" ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ರಾವೋ, "ಜೀವನಕ್ಕೆ ತುಂಬಾ ಅನ್ಯಾಯವಾಗಿದೆ" ಎಂದು ಹೇಳಿದರು. ಇದಾದ ನಂತರ ಅವರು ರವೀಂದ್ರ ಜಡೇಜಾ ಅವರನ್ನು ಅಪ್ಪಿಕೊಂಡು ಧೋನಿ ಜೊತೆ ಕೈಕುಲುಕಿದರು.
ಬ್ರಾವೋ 2011, 2018 ಮತ್ತು 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು. 2023ರ ವಿಜಯೋತ್ಸವದ ಸಮಯದಲ್ಲಿ ಅವರು ಫ್ರಾಂಚೈಸಿಯ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದರು. ಆದಾಗ್ಯೂ, 2025ರ ಋತುವಿಗೆ ಮುಂಚಿತವಾಗಿ, ಬ್ರಾವೋ CSK ಕೋಚಿಂಗ್ ಸೆಟಪ್‌ನಿಂದ ಬೇರ್ಪಟ್ಟರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನೊಂದಿಗೆ ಮಾರ್ಗದರ್ಶಕ ಪಾತ್ರವನ್ನು ವಹಿಸಿಕೊಂಡರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ