
ಶನಿವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕ ಶ್ರೇಯಸ್ ಅಯ್ಯರ್ ಕೋಪಗೊಂಡಿದ್ದರು. ಪಿಬಿಕೆಎಸ್ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಬೌಲಿಂಗ್ ವೇಳೆ ವಿಕೆಟ್ ಕೀಪರ್ ಪ್ರಭ್ಸಿಮ್ರಾನ್ ಸಿಂಗ್ ಕ್ಯಾಚ್ ಹಿಡಿದಾಗ ಟ್ರಾವಿಸ್ ಹೆಡ್ ಔಟ್ ಆಗಿದ್ದಾರೆಂದು ಮ್ಯಾಕ್ಸ್‌ವೆಲ್ ಭಾವಿಸಿದ್ದರು. ಆದರೆ, ಅಂಪೈರ್ ನಾಟ್ ಔಟ್ ನೀಡಿದ ಕೂಡಲೇ ಡಿಆರ್‌ಎಸ್‌ಗೆ ಸನ್ನೆ ಮಾಡುತ್ತಾರೆ. ಈ ವೇಳೆ ಶ್ರೇಯಸ್ ಅಯ್ಯರ್ ತಮ್ಮ ತಂಡದ ಆಟಗಾರರೊಬ್ಬರ ಮೇಲೆ ಕೋಪಗೊಂಡಿರುವುದು ಕಾಣಿಸಿದೆ. ತನ್ನನ್ನು ಕೇಳದೆಯೇ ಡಿಆರ್‌ಎಸ್ ತೆಗೆದುಕೊಳ್ಳಲು ಮುಂದಾಗಿದ್ದು ಶ್ರೇಯಸ್ ಅವರಿಗೆ ಕೋಪ ತರಿಸಿದೆ ಎನ್ನಲಾಗಿದೆ. ಅಂತಿಮವಾಗಿ, ಮ್ಯಾಕ್ಸ್‌ವೆಲ್ ಅವರ ಒತ್ತಾಯದ ಮೇರೆಗೆ ಅಯ್ಯರ್ ಡಿಆರ್‌ಎಸ್ ತೆಗೆದುಕೊಳ್ಳುತ್ತಾರೆ.
ಡಿಆರ್‌ಎಸ್ ಸನ್‌ರೈಸರ್ಸ್ ಹೈದರಾಬಾದ್ ಪರ ಬಂದು ಟ್ರಾವಿಸ್ ಹೆಡ್ ಔಟ್ ಆಗದೆ ಉಳಿದುಕೊಳ್ಳುತ್ತಾರೆ. ಅಯ್ಯರ್ ಅವರು ತಂಡದ ಯಾವ ಆಟಗಾರನ ಮೇಲೆ ಕೋಪಗೊಂಡಿದ್ದರು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಅಯ್ಯರ್ ಅವರು ಆ ವೇಳೆ ಹೇಳಿದ್ದು ಏನೆಂದು ಕೇಳಿಸದಿದ್ದರೂ, ಅವರು 'ಮೊದಲು ನನ್ನನ್ನು ಕೇಳಿ' ಎಂದು ಹೇಳಿರುವುದು ಸ್ಪಷ್ಟವಾಗಿದೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಸೋಲು ಕಂಡಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೇಯಸ್ ಅಯ್ಯರ್ (82) ಅವರ ಅಬ್ಬರದ ಅರ್ಧಶತಕ ಮತ್ತು ಹನ್ನೊಂದು ಎಸೆತಗಳಲ್ಲಿ 34 ರನ್ ಗಳಿಸಿದ ಮಾರ್ಕಸ್ ಸ್ಟೊಯಿನಿಸ್ ಅವರ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು.
ಪಂಜಾಬ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಬಾದ್ ಕೂಡ ಸ್ಪೋಟಕ ಆರಂಭ ಪಡೆಯಿತು.ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ 246 ರನ್‌ಗಳ ಗುರಿಯನ್ನು ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.
ಅಭಿಷೇಕ್ 55 ಎಸೆತಗಳಲ್ಲಿ 14 ಬೌಂಡರಿ 10 ಸಿಕ್ಸರ್ ಸಹಿತ 151 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿತ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 66 ರನ್ ಗಳಿಸಿದರೆ, ಕ್ಲಾಸೆನ್ ಅಜೇಯ 21 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
Advertisement