
ಲಾಹೋರ್: ಭಾರತದ ಐಪಿಎಲ್ ಕ್ರಿಕೆಟ್ ಟೂರ್ನಿಗೆ ಪರ್ಯಾಯವಾಗಿ ಪಾಕಿಸ್ತಾನ ಆರಂಭಿಸಿದ್ದ ಪಿಎಸ್ಎಲ್ (PSL) ಟೂರ್ನಿ ಈ ವರ್ಷ ಆರಂಭದಲ್ಲೇ ಆಘಾತ ಎದುರಾಗಿದ್ದು, ಪಾಕಿಸ್ತಾನಿ ಬೌಲರ್ ಮೇಲೆ ನಿಷೇಧದ ತೂಗುಗುತ್ತಿ ತೂಗುತ್ತಿದೆ.
ಹೌದು.. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಭಾನುವಾರ ನಡೆದ ಲಾಹೋರ್ ಖಲಂದರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಆಫ್ ಸ್ಪಿನ್ನರ್ ಉಸ್ಮಾನ್ ತಾರಿಕ್ ವಿವಾದಾಸ್ಪದ ಬೌಲಿಂಗ್ ಮಾಡಿ ಇದೀಗ ಅಪಾಯಕ್ಕೆ ಸಿಲುಕಿದ್ದಾರೆ.
ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯಾವಳಿಯ 8ನೇ ಪಂದ್ಯದಲ್ಲಿ ಕ್ವೆಟ್ಟಾ ತಂಡವು 79 ರನ್‌ಗಳ ಭಾರೀ ಸೋಲನ್ನು ಅನುಭವಿಸಿತು. ಪಂದ್ಯದಲ್ಲಿ ತಾರಿಕ್ ತಮ್ಮ ನಾಲ್ಕು ಓವರ್‌ಗಳ ಪೂರ್ಣ ಕೋಟಾವನ್ನು ಪೂರ್ಣಗೊಳಿಸಿ 31 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು.
ಬೌಲಿಂಗ್ ಆ್ಯಕ್ಷನ್ ವಿವಾದ, ನಿಷೇಧದ ತೂಗುಕತ್ತಿ
ಇನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಆಫ್ ಸ್ಪಿನ್ನರ್ ಉಸ್ಮಾನ್ ತಾರಿಕ್ ರ ಬೌಲಿಂಗ್ ಆ್ಯಕ್ಷನ್ ವಿವಾದಕ್ಕೆ ಗ್ರಾಸವಾಗಿದ್ದು, ಈ ಬಗ್ಗೆ ಪಿಎಸ್ಎಲ್ ಅಂಪೈರ್ ಗಳು ದೂರು ನೀಡಿದ್ದಾರೆ. ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಆನ್-ಫೀಲ್ಡ್ ಅಂಪೈರ್‌ಗಳಾದ ಅಹ್ಸಾನ್ ರಜಾ ಮತ್ತು ಕ್ರಿಸ್ ಬ್ರೌನ್ ವರದಿ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಇತ್ತೀಚಿನ ವರದಿಯ ಹೊರತಾಗಿಯೂ ಸ್ಪಿನ್ನರ್‌ಗೆ ಪಿಎಸ್‌ಎಲ್ 2025 ಪಂದ್ಯಗಳಲ್ಲಿ ಬೌಲಿಂಗ್ ಮುಂದುವರಿಸಲು ಅವಕಾಶ ನೀಡಲಾಗುವುದು. ಅಂತೆಯೇ ತಾರಿಕ್ ರ ಪುನರಾವರ್ತಿತ ಅಪರಾಧವು ಬೌಲಿಂಗ್ ಕರ್ತವ್ಯಗಳಿಂದ ತಕ್ಷಣದ ಅಮಾನತು ಅಥವಾ ನಿಷೇಧಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
"ನಿಯಮಗಳ ಪ್ರಕಾರ, ಉಸ್ಮಾನ್ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದನ್ನು ಮುಂದುವರಿಸಬಹುದು. ಆದಾಗ್ಯೂ ಮತ್ತೆ ಅವರಿಂದ ವಿವಾದಾಸ್ಪದ ಬೌಲಿಂಗ್ ಶೈಲಿ ಮುಂದುವರೆದರೆ, ಅವರನ್ನು ಬೌಲಿಂಗ್‌ನಿಂದ ಅಮಾನತುಗೊಳಿಸಲಾಗುತ್ತದೆ ಮತ್ತು ಅವರು ಬೌಲಿಂಗ್ ಅನ್ನು ಪುನರಾರಂಭಿಸುವ ಮೊದಲು ಐಸಿಸಿ ಮಾನ್ಯತೆ ಪಡೆದ ಪ್ರಯೋಗಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
Advertisement