
ಮೊಹಾಲಿ: ಪಂಜಾಬಿನ ಮೊಹಾಲಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ 2025 ಟೂರ್ನಿಯ 31ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (kkR) ವಿರುದ್ಧ 16 ರನ್ ಗಳಿಂದ ಪಂಜಾಬ್ ಕಿಂಗ್ಸ್ (PBKS) ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 15.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 111 ರನ್ ಗಳಿಸಿತು. ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 22, ಪ್ರಭಾಸಿಮ್ರಾನ್ ಸಿಂಗ್ 30 ರನ್ ಗಳಿಸಿದಾಗ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ರಮಣ್ ದೀಪ್ ಸಿಂಗ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾದರು. ಅವರು ಕೂಡಾ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ರಮಣ್ ದೀಪ್ ಸಿಂಗ್ ಗೆ ಕ್ಯಾಚ್ ನೀಡಿ ಫೆವಿಲಿಯನ್ ಗೆ ಹೆಜ್ಜೆ ಹಾಕಿದರು.
ನಂತರ ಬಂದ ಜೊಸ್ ಇಂಗ್ಲಿಷ್ ಕೇವಲ 2 ರನ್ ಗಳಿಸಿ ವರುಣ್ ಬೌಲಿಂಗ್ ನಲ್ಲಿ ಔಟಾದರೆ, ನೆಹಲ್ ವಧೇರಾ 10, ಗ್ಲೇನ್ ಮ್ಯಾಕ್ ವೆಲ್ 7, ಸೂರ್ಯಾಂಶ್ ಶೆಡ್ಜ್ 4, ಶಶಾಂಕ್ ಸಿಂಗ್ 18, ಮಾರ್ಕೊ ಜಾನ್ಸೆನ್ 1, ಕ್ಸೆವಿಯರ್ ಬರ್ಟ್ ಲೆಟ್ 11 ಹಾಗೂ ಅರ್ಶ್ ದೀಪ್ ಸಿಂಗ್ ಕೇವಲ 1 ರನ್ ಗಳಿಸಿದರು. ಹೀಗಾಗಿ ಪಂಜಾಬ್ ಕಿಂಗ್ಸ್ 15.3 ಓವರ್ ಗಳಲ್ಲಿ ಆಲೌಟ್ ಆಗುವ ಮೂಲಕ ಕೇವಲ 111 ರನ್ ಗಳಿಸಿತು.
ಕೆಕೆಆರ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಹರ್ಷಿತ್ ರಾಣಾ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ತಲಾ 2, ವೈಭವ್ ಆರೋರಾ, ಹೆನ್ರಿಚ್ ನಾರ್ತ್ಜೆ ತಲಾ ಒಂದೊಂದು ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ ನೀಡಿದ 112 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕೆಕೆಆರ್ ಪರ ಕ್ವಿಂಟಾನ್ ಡಿ ಕಾಕ್ ಕೇವಲ 2 ರನ್ ಗಳಿಸಿ ಸೂರ್ಯವಂಶ್ ಶೆಡ್ಜ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸುನಿಲ್ ನರೈನ್ 5, ನಾಯಕ ಅಜಿಂಕ್ಯಾ ರೆಹಾನೆ 17 ರನ್ ಗಳಿಸಿ ಎಲ್ ಬಿಡಬ್ಲ್ಯೂ ಗೆ ಬಲಿಯಾದರು.
ಆಂಗ್ಕ್ರಿಶ್ ರಘುವಂಶಿ 37 ರನ್ ಗಳಿಸಿದಾಗ ಚಹಲ್ ಬೌಲಿಂಗ್ ನಲ್ಲಿ ಔಟಾದರು. ವೆಂಕಟೇಶ್ ಅಯ್ಯರ್ 7 ರನ್ ಗಳಿಸಿದಾಗ ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ರಿಂಕು ಸಿಂಗ್ ಕೇವಲ 2 ರನ್ ಗಳಿಗೆ ಚಹಾಲ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಬಂದ ಆಂಡ್ರೆ ರಸ್ಸೆಲ್ 17 ರನ್ ಗಳಿಸಿದರೆ ರಮಣ್ ದೀಪ್ ಸಿಂಗ್ ಅವರನ್ನು ಶೂನ್ಯಕ್ಕೆ ಚಹಾಲ್ ಔಟ್ ಮಾಡುವಲ್ಲಿ ಯಶಸ್ವಿಯಾದರು.
ಹರ್ಷಿತ್ ರಾಣಾ ಕೂಡಾ ಕೇವಲ 3 ರನ್ ಗಳಿಸಿ ಫೆವಿಲಿಯನ್ ಸೇರಿದರು. ನಂತರ ಬಂದ ವೈಭವ್ ಅರೋರಾ ಮತ್ತು ಹೆನ್ರಿಚ್ ಶೂನ್ಯಕ್ಕೆ ಔಟಾಗುವ ಮೂಲಕ ಕೆಕೆಆರ್ 15. 1 ಓವರ್ ಗಳಲ್ಲಿ 95 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು. ಪಂಜಾಬ್ ಕಿಂಗ್ಸ್ ಪರ ಮಿಂಚಿದ ಯಜುವೇಂದ್ರ ಚಹಾಲ್ 4 ವಿಕೆಟ್ ಕಬಳಿಸಿದರೆ ಮಾರ್ಕೊ ಜಾನ್ಸೆನ್ 3 ಹಾಗೂ ಕ್ಸೆವಿಯರ್ ಬರ್ಟ್ ಲೆಟ್, ಗ್ಲೆನ್ ಮ್ಯಾಕ್ಸ್ ವೆಲ್ ತಲಾ ಒಂದೊಂದು ವಿಕೆಟ್ ಪಡೆದರು. 4 ವಿಕೆಟ್ ಪಡೆದ ಚಹಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
Advertisement