
ದುಬೈ: ಭಾರತ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ICC ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ.
ಈ ಪ್ರಶಸ್ತಿಗೆ ನ್ಯೂಜಿಲೆಂಡ್ ನ ಜೀಕಬ್ ಡಫಿ ಮತ್ತು ರಚಿನ್ ರವೀಂದ್ರ ಅವರ ತೀವ್ರ ಪೈಪೋಟಿಯನ್ನು ಮೀರಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 243 ರನ್ ಗಳಿಸುವ ಮೂಲಕ ತಂಡದ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಅವರ ಸ್ಥಿರ ಪ್ರದರ್ಶನ ಮಧ್ಯಮ ಓವರ್‌ಗಳಲ್ಲಿ ಸ್ಥಿರತೆಯನ್ನು ಒದಗಿಸಿತು. ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಾಬಲ್ಯವನ್ನು ಖಾತ್ರಿಪಡಿಸಿತು.
ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ 79 ರನ್ ಗಳಿಸಿದ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ 45 ರನ್ ಗಳ ನೆರವಿನಿಂದ ಭಾರತ ಯಶಸ್ವಿಯಾಗಿ ಚೇಸ್ ಮಾಡಿತ್ತು. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 48 ರನ್ ಗಳಿಸುವ ಮೂಲಕ ಭಾರತ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಐಸಿಸಿ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ನಾನು ಆಯ್ಕೆಯಾಗಿರುವುದು ಸಂತಸ ಮೂಡಿಸಿದೆ. ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಿಂಗಳು ಈ ಗೌರವ ಒಲಿದಿರುವುದನ್ನು ಎಂದಿಗೂ ಮರೆಯಲಾರೆ ಎಂದು ಅಯ್ಯರ್ ಅವರು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement