
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಫಾರೂಕ್ ನಜರ್ ಎಂಬ ಪಾಕಿಸ್ತಾನಿ ಅಭಿಮಾನಿಯೊಬ್ಬರು ಪಾಲ್ಗೊಂಡಿದ್ದರು. ಪಂದ್ಯದ 5ನೇ ದಿನದಂದು ಪಾಕಿಸ್ತಾನದ ಸೀಮಿತ ಓವರ್‌ಗಳ ಕ್ರಿಕೆಟ್ ಜೆರ್ಸಿ ಧರಿಸಿದ್ದ ಅಭಿಮಾನಿ ಫಾರೂಕ್ ಅವರನ್ನು ಭದ್ರತಾ ಸಿಬ್ಬಂದಿಯೊಬ್ಬರು ಜೆರ್ಸಿಯನ್ನು ಮುಚ್ಚಿಕೊಳ್ಳುವಂತೆ ತಿಳಿಸಿದ್ದಾರೆ. ತಾವು ಲಂಕಾಷೈರ್‌ಗಾಗಿ ಕೆಲಸ ಮಾಡುತ್ತಿದ್ದು, ವಿಶೇಷವಾಗಿ ಪಂದ್ಯದ ಸಮಯದಲ್ಲಿ ಬೇರೆ ತಂಡದ ಜೆರ್ಸಿ ಧರಿಸುವುದು ಸೂಕ್ತವಲ್ಲ ಅಥವಾ ಇದು ನಮ್ಮ ನೀತಿಗೆ ವಿರುದ್ಧ ಎಂದು ಸಿಬ್ಬಂದಿ ಹೇಳಿದ್ದಾರೆ. ಫಾರೂಕ್ ಶರ್ಟ್ ಮುಚ್ಚಲು ನಿರಾಕರಿಸಿದಾಗ, ಭದ್ರತಾ ಸಿಬ್ಬಂದಿ ಅವರನ್ನು ಕ್ರೀಡಾಂಗಣದಿಂದಲೇ ಹೊರಗೆ ಕಳುಹಿಸಿದ್ದಾರೆ.
ಲಂಕಾಷೈರ್ ಕ್ರಿಕೆಟ್ ಕ್ಲಬ್ ಇದೀಗ ಅಂತಹ ಕ್ರಮದ ಹಿಂದಿನ ಕಾರಣವನ್ನು ವಿವರಿಸಿದೆ. ಹಿಂದಿನ ದಿನ (ಶನಿವಾರ) ಭಾರತ ಮತ್ತು ಪಾಕಿಸ್ತಾನ ಅಭಿಮಾನಿಗಳ ನಡುವೆ ವಾಗ್ವಾದ ನಡೆದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
'ಮೊದಲನೆಯದಾಗಿ, ಪಾಕಿಸ್ತಾನ ಕ್ರಿಕೆಟ್ ಜೆರ್ಸಿಯನ್ನು ಧರಿಸಿದ್ದಕ್ಕಾಗಿ ವ್ಯಕ್ತಿಯನ್ನು ಕ್ರೀಡಾಂಗಣದಿಂದ ಹೊರಗೆ ಕಳುಹಿಸುವ ಉದ್ದೇಶವಿರಲಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಶನಿವಾರ ನಡೆದ ಘಟನೆಯಿಂದ ಮುನ್ನೆಚ್ಚರಿಕೆ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.
'ಶನಿವಾರ ಬೆಂಬಲಿಗರ ಗುಂಪೊಂದು ಪಾಕಿಸ್ತಾನದ ರಾಷ್ಟ್ರೀಯ ಧ್ವಜವನ್ನು ಬೀಸಿತು. ಇದು ಅಲ್ಲೇ ಹತ್ತಿರದಲ್ಲಿದ್ದ ಭಾರತೀಯ ಅಭಿಮಾನಿಗಳೊಂದಿಗೆ ಉದ್ವಿಗ್ನತೆಗೆ ಕಾರಣವಾಯಿತು. ಆ ಸಂದರ್ಭದಲ್ಲಿ, ನಮ್ಮ ಮೇಲ್ವಿಚಾರಕರು ಗೌರವಯುತವಾಗಿ ವ್ಯಕ್ತಿಗಳಿಗೆ ಧ್ವಜವನ್ನು ದೂರವಿಡುವಂತೆ ಕೇಳುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಿದರು' ಎಂದಿದೆ.
'ಈ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ತಂಡವು ಭಾನುವಾರ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿಯ ವಿಧಾನವನ್ನು ಅಳವಡಿಸಿಕೊಂಡಿತು. ಸ್ಟ್ಯಾಂಡ್ ಮೇಲ್ವಿಚಾರಕರೊಬ್ಬರು ವ್ಯಕ್ತಿಯನ್ನು ಅವರ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಯಾವುದೇ ಸಂಭಾವ್ಯ ಉಲ್ಬಣವನ್ನು ತಪ್ಪಿಸಲು ತನ್ನ ಶರ್ಟ್ ಅನ್ನು ಮುಚ್ಚಿಕೊಳ್ಳುವಂತೆ ಹೇಳಿದ್ದಾರೆ. ಮೇಲ್ವಿಚಾರಕ ಮತ್ತು ಪ್ರತಿಕ್ರಿಯೆ ತಂಡದಿಂದ ಹಲವಾರು ವಿನಂತಿಗಳ ಹೊರತಾಗಿಯೂ, ವ್ಯಕ್ತಿಯು ಪದೇ ಪದೆ ಅದನ್ನು ಅನುಸರಿಸಲು ನಿರಾಕರಿಸಿದರು. ಹೀಗಾಗಿ, ಅವರನ್ನು ಮೈದಾನದಿಂದ ಹೊರಗೆ ಕಳುಹಿಸಲಾಯಿತು' ಎಂದು ತಿಳಿಸಿತು.
Advertisement