
ಒವೆಲ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ನ ನಾಲ್ಕನೇ ದಿನದಿಂದ ವಿಕೆಟ್ ಪಡೆಯಲು ಪರದಾಡಿದ ಭಾರತದ ಬೌಲರ್ ಗಳಾದ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ವಿರುದ್ಧ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕಿಡಿಕಾರಿದ್ದಾರೆ. ಭಾರತದ ಬೌಲಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲೂ ಆದ ತಪ್ಪುಗಳಿಂದ ಇಂಗ್ಲೆಂಡ್ ಮೇಲುಗೈ ಸಾಧಿಸಲು ಅವಕಾಶವಾಯಿತು ಎಂದು ಕಾರ್ತಿಕ್ ಹೇಳಿದ್ದಾರೆ.
ಜಸ್ಪ್ರೀತ್ ಬೂಮ್ರಾ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದ್ದರೆ ಶಾರ್ದೂಲ್ ಠಾಕೂರ್ ಕೂಡಾ ಆಡುತ್ತಿಲ್ಲ. ಹಾಗಾಗೀ ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಮೇಲೆ ತಂಡ ಅವಲಂಬಿತವಾಗಿದೆ. ಇದರ ಹೊರತಾಗಿಯೂ ವಿಕೆಟ್ ಪಡೆಯುವಲ್ಲಿ ಆಕಾಶ್ ದೀಪ್ ವಿಫಲರಾದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ 20 ಓವರ್ ಗಳಲ್ಲಿ 85 ರನ್ ಗಳಿಗೆ 1 ವಿಕೆಟ್ ಮಾತ್ರ ಭಾರತ ಗಳಿಸಿತ್ತು.
ಈ ಕುರಿತು Cricbuzz ನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಆಕಾಶ್ ದೀಪ್ ಅವರ ಕಳಪೆ ಪ್ರದರ್ಶನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಡ್ಜ್‌ಬಾಸ್ಟನ್ ನಲ್ಲಿ ಆಕಾಶ್ ದೀಪ್ 10 ವಿಕೆಟ್ ಪಡೆದು ಮಿಂಚಿದ್ದರು.
ಆರಂಭದಲ್ಲಿ ಆಕಾಶ್ ದೀಪ್ ಉತ್ತಮವಾಗಿ ಬೌಲಿಂಗ್ ಮಾಡಬಹುದೆಂದು ಭಾವಿಸುತ್ತೇನೆ. ಅವರು ನಿಜವಾಗಿಯೂ ತನ್ನ ಪ್ರತಿಭೆಗೆ ತಕ್ಕಂತೆ ಬೌಲಿಂಗ್ ಮಾಡಿದ್ದಾರೆ ಅಂತಾ ಭಾವಿಸುವುದಿಲ್ಲ. ಏಕೆಂದರೆ ಎಡ್ಜ್‌ಬಾಸ್ಟನ್‌ನಲ್ಲಿ ಅವರು ಅತ್ಯುತ್ತಮ ಮಟ್ಟದ ಬೌಲಿಂಗ್ ಮಾಡಿದ್ದರು. ಆದರೆ ತದನಂತರ ಈ ರೀತಿಯ ಕಳಪೆ ಪ್ರದರ್ಶನ ಮಾಡಿದ್ದಾರೆ. ಯಾಕೆ ಎಂಬುದು ನನಗೆ ತಿಳಿದಿಲ್ಲ. ಯಾಕೆ ಅವರು ಚೆನ್ನಾಗಿ ಆಡುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ದಿನೇಶ್ ಕಾರ್ತಿಕ್ ಟೀಕಿಸಿದ್ದಾರೆ.
ಇಂಗ್ಲೆಂಡ್‌ನ ಇನ್ನಿಂಗ್ಸ್‌ನ ಪ್ರಮುಖ ಕ್ಷಣದ ಸಂದರ್ಭದಲ್ಲಿ ಹ್ಯಾರಿ ಬ್ರೂಕ್‌ನ ನಿರ್ಣಾಯಕ ಕ್ಯಾಚ್ ಕೈ ಚೆಲ್ಲಿದ್ದ ಮೊಹಮ್ಮದ್ ಸಿರಾಜ್ ವಿರುದ್ಧವೂ ದಿನೇಶ್ ಕಾರ್ತಿಕ್ ವಾಗ್ದಾಳಿ ನಡೆಸಿದ್ದಾರೆ. ಬ್ರೂಕ್ 19 ರನ್ ಗಳಿಸಿದ್ದಾಗ ಕ್ಯಾಚ್ ಹಿಡಿಯುವ ಯತ್ನದಲ್ಲಿ ಬೌಂಡರಿ ಲೈನ್ ಮೇಲೆ ಸಿರಾಜ್ ಕಾಲಿಟ್ಟರು. ಇದರಿಂದ ಜೀವದಾನ ಪಡೆದ ಬ್ರೂಕ್ 98 ಎಸೆತಗಳಲ್ಲಿ 111 ರನ್ ಗಳಿಸಿದರು. ಪಂದ್ಯದ ದಿಕ್ಕನ್ನೆ ಬದಲಾಯಿಸಿದರು.
ಸಿರಾಜ್ ಮತ್ತು ಪ್ರಸಿದ್ಧ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಪಂದ್ಯದ ನಿರ್ಣಾಯಕ ಹಂತದಲ್ಲಿ ಸಿರಾಜ್ ಆ ಕ್ಯಾಚ್ ಅನ್ನು ಕೈಬಿಟ್ಟಾಗ ಪಂದ್ಯದ ದಿಕ್ಕೆ ಬದಲಾಯಿತು. ಆ ಓವರ್ ಪ್ರಾರಂಭವಾಗುವ ಮೊದಲು ಬೌಂಡರಿ ಲೈನ್ ನಲ್ಲಿದ್ದ ಸಿರಾಜ್ ಗೆ ಹಾಗೆ ಆಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲವೇನೂ? ತದನಂತರ ಭಾರತ ತಂಡ ಒತ್ತಡಕ್ಕೆ ಸಿಲುಕಿದ್ದನ್ನು ನೋಡಬಹುದು ಎಂದು ಕಾರ್ತಿಕ್ ಹೇಳಿದರು.
Advertisement