
ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಹೈದರ್ ಅಲಿ ವಿರುದ್ಧ ಯುಕೆಯಲ್ಲಿ ಕ್ರಿಮಿನಲ್ ತನಿಖೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅವರನ್ನು ಅಮಾನತುಗೊಳಿಸಿದೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ್ ಶಾಹೀನ್ಸ್ ತಂಡದ ಭಾಗವಾಗಿದ್ದ ಅಲಿ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿದೆ ಎಂದು ವರದಿಯಾಗಿದೆ. 'ಈ ಪ್ರಕ್ರಿಯೆಯ ಉದ್ದಕ್ಕೂ ಅವರ ಹಕ್ಕುಗಳನ್ನು ರಕ್ಷಿಸಲು' ಹೈದರ್‌ಗೆ ಕಾನೂನು ಬೆಂಬಲ ನೀಡುವುದಾಗಿ ಪಿಸಿಬಿ ಹೇಳಿಕೆ ನೀಡಿದೆ.
ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು (GMP) ಈ ವಾರದ ಆರಂಭದಲ್ಲಿ ಅತ್ಯಾಚಾರದ ದೂರು ಸ್ವೀಕರಿಸಿದ ನಂತರ 24 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ. ಆರೋಪಿ ಹೆಸರನ್ನು ಬಹಿರಂಗಪಡಿಸಿಲ್ಲ. ಸದ್ಯ ಹೆಚ್ಚಿನ ವಿಚಾರಣೆ ಬಾಕಿ ಇದ್ದು, ಅವರಿಗೆ ಜಾಮೀನು ನೀಡಲಾಗಿದೆ ಎಂದಿದೆ.
'ನಾವು 24 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದೇವೆ. ಈ ಘಟನೆ ಜುಲೈ 23ರ ಬುಧವಾರದಂದು ಮ್ಯಾಂಚೆಸ್ಟರ್‌ನ ಆವರಣದಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ಹೆಚ್ಚಿನ ವಿಚಾರಣೆ ಬಾಕಿ ಇರುವ ಕಾರಣ ಆ ವ್ಯಕ್ತಿಗೆ ಜಾಮೀನು ನೀಡಲಾಗಿದೆ' ಎಂದು ಜಿಎಂಪಿ ಹೇಳಿಕೆಯಲ್ಲಿ ತಿಳಿಸಿದೆ.
ತನಿಖೆಯ ಫಲಿತಾಂಶ ಬರುವವರೆಗೂ ಹೈದರ್ ಅಲಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ ನೀತಿ ಸಂಹಿತೆಯ ಅಡಿಯಲ್ಲಿ ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಲಾಗಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
'ಕ್ರಿಕೆಟರ್ ಹೈದರ್ ಅಲಿ ಅವರನ್ನು ಒಳಗೊಂಡ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ನಡೆಸುತ್ತಿರುವ ಕ್ರಿಮಿನಲ್ ತನಿಖೆಯ ಬಗ್ಗೆ ಪಿಸಿಬಿಗೆ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನ ಶಾಹೀನ್ಸ್ ತಂಡದ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ. ಯುನೈಟೆಡ್ ಕಿಂಗ್‌ಡಮ್‌ನ ಕಾನೂನು ಕಾರ್ಯವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ಪಿಸಿಬಿ ಸಂಪೂರ್ಣವಾಗಿ ಗೌರವಿಸುತ್ತದೆ ಮತ್ತು ತನಿಖೆಯನ್ನು ಸರಿಯಾದ ಸಮಯದಲ್ಲಿ ನಡೆಸಲು ಅವಕಾಶ ನೀಡುವ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳುತ್ತದೆ. ಅದರಂತೆ, ನಡೆಯುತ್ತಿರುವ ತನಿಖೆಯ ಫಲಿತಾಂಶ ಬರುವವರೆಗೂ ತಕ್ಷಣವೇ ಜಾರಿಗೆ ಬರುವಂತೆ ಹೈದರ್ ಅಲಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಪಿಸಿಬಿ ನಿರ್ಧರಿಸಿದೆ. ಕಾನೂನು ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ಮತ್ತು ಎಲ್ಲ ಸಂಗತಿಗಳು ಸರಿಯಾದ ನಂತರ, ಅಗತ್ಯವಿದ್ದರೆ, ಪಿಸಿಬಿ ತನ್ನ ನೀತಿ ಸಂಹಿತೆಯ ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಕಾಯ್ದಿರಿಸಿದೆ' ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
Advertisement