
ನವದೆಹಲಿ: ಇತ್ತೀಚಿಗೆ ಮುಕ್ತಾಯವಾದ ಭಾರತ v/s ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಯ ಕೊನೆಯ ದಿನದಾಟ ಸಾಕಷ್ಟು ರೋಚಕವಾಗಿತ್ತು. ಭಾರತಕ್ಕೆ ಕೊನೆಯ ದಿನ ನಾಲ್ಕು ವಿಕೆಟ್ ಗಳ ಅಗತ್ಯವಿತ್ತು. ಪಂದ್ಯ ಗೆದ್ದರೆ ಸರಣಿ ಸಮಬಲಗೊಳ್ಳುತಿತ್ತು, ಇನ್ನೊಂಡೆದೆ ಇಂಗ್ಲೆಂಡ್ ಗೆ 35 ರನ್ ಗಳ ಅಗತ್ಯವಿತ್ತು.
ಆದಾಗ್ಯೂ, ಕೊನೆಯ ದಿನದಾಟ ಮೊದಲ ಒಂದು ಗಂಟೆಯಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಅತ್ಯುತ್ತಮ ಬೌಲಿಂಗ್ ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಆರು ರನ್ ಗಳ ಅಂತರದಿಂದ ಭಾರತ ಜಯ ಗಳಿಸಿತ್ತು. ಇದು ಭಾರತದ ಟೆಸ್ಟ್ ಇತಿಹಾಸದಲ್ಲಿ ಅತಿ ಕಡಿಮೆ ಅಂತರದ ಗೆಲುವಾಗಿ ದಾಖಲಾಯಿತು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್. ಅಶ್ವಿನ್, ಜಸ್ಪ್ರೀತ್ ಬೂಮ್ರಾ ಅವರಂತಹ ಸ್ಟಾರ್ ಆಟಗಾರರು ಇಲ್ಲದೆಯೂ ಐದನೇ ಟೆಸ್ಟ್ ಗೆಲುವು ಆಟಗಾರರಲ್ಲಿ ಆತ್ಮ ವಿಶ್ವಾಸ ಇಮ್ಮಡಿಗೊಳಿಸಿತು.
ಐಸಿಸಿ ಕೋಚ್ ಜೆಫ್ರಿ ಕ್ರೋವ್ ಎಚ್ಚರಿಕೆ : ಐಸಿಸಿ ಕೋಚ್ ಜೆಫ್ರಿ ಕ್ರೋವ್ ಎಚ್ಚರಿಕೆಯೊಂದಿಗೆ ಭಾರತ ಐದನೇ ದಿನದಾಟದಂದು ಮೈದಾನಕ್ಕೆ ಪ್ರವೇಶಿಸಿತ್ತು. ನಿಧಾನಗತಿಯ ಬೌಲಿಂಗ್ ರೇಟಿಗಾಗಿ ನಾಲ್ಕು WTC (World Test Championship) ಪಾಯಿಂಟ್ ಕಡಿತದ ಎಚ್ಚರಿಕೆಯನ್ನು ಜೆಫ್ ಕ್ರೋವ್ ನೀಡಿದ್ದರು ಎಂದು ವರದಿಯೊಂದು ಹೇಳಿದೆ.
ಒಟ್ಟಾರೆಯಾಗಿ ಭಾರತ ಆರು ಓವರ್ ಗಳನ್ನು ನಿಧಾನವಾಗಿ ಮಾಡಿತ್ತು. ಇದರಿಂದಾಗಿ, ನಾಲ್ಕು ಪಾಯಿಂಟ್ ಕಡಿತಗೊಳ್ಳುವ ಸಾಧ್ಯತೆಯಿತ್ತು. ಹಾಗಾಗಿ, ಕೊನೆಯ ದಿನದ ಪಂದ್ಯದಲ್ಲಿ ವಿಕೆಟ್ ಪಡೆಯಬೇಕಾಗಿತ್ತು ಮತ್ತು ಓವರ್ ರೇಟ್ ಕೂಡಾ ಸುಧಾರಿಸಿಕೊಳ್ಳಬೇಕಾದ ಅನೀವಾರ್ಯ ಎದುರಾಗಿತ್ತು. ಆಗ, ಗಂಭೀರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಓವರ್ ರೇಟ್ ಸುಧಾರಿಸಿಕೊಳ್ಳಲು ಸ್ಪಿನ್ನರ್ ಅನ್ನು ಬಳಸಿಕೊಳ್ಳುವ ಸಲಹೆ ಕೇಳಿಬಂದಿದೆ. ಇದರಿಂದಾಗಿ ದಂಡವನ್ನು ತಪ್ಪಿಸಬಹುದು ಎನ್ನುವ ಲೆಕ್ಕಾಚಾರವಾಗಿತ್ತು. ಈ ಸಭೆಯಲ್ಲಿ ಸಹಾಯಕ ಕೋಚ್ ಸಿತಾಂಶು ಕೋಟಕ್, ಶುಭ್ಮನ್ ಗಿಲ್ ಕೂಡಾ ಭಾಗವಹಿಸಿದ್ದರು.
ಆದರೆ, ಇದಕ್ಕೆ ಮುಖ್ಯ ತರಬೇತಿದಾರ ಗೌತಮ್ ಗಂಭೀರ್ ಒಪ್ಪಿಗೆ ನೀಡಿಲ್ಲ. ಪಾಯಿಂಟ್ ಅನ್ನು ಆಮೇಲೆ ನೋಡಿಕೊಳ್ಳೋಣ, ಮೊದಲು ಪಂದ್ಯ ಗೆಲ್ಲುವುದರ ಕಡೆಗೆ ಗಮನ ಕೊಡೋಣ. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ವೇಗಿಗಳನ್ನೇ ಬಳಸಿಕೊಳ್ಳಿ ಎನ್ನುವ ಸೂಚನೆಯನ್ನು ಗಿಲ್ ಗೆ ನೀಡಿದ್ದಾರೆ. ಅದರ ಪ್ರಕಾರ, ಮೊದಲ ಒಂದು ಗಂಟೆಯಲ್ಲಿಯೇ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ದ್ ಕೃಷ್ಣಗೆ ಬೌಲಿಂಗ್ ಅನ್ನು ಶುಭ್ಮನ್ ಗಿಲ್ ನೀಡಿದರು.
ಗಂಭೀರ್ ಅವರ ನಿರ್ಧಾರ ಸರಿಯಾಗಿ ವರ್ಕೌಟ್ ಆಯಿತು. ಒಂದು ಕಡೆ ಭಾರತವೂ ಪಂದ್ಯವನ್ನೂ ಗೆದ್ದಿತು. ಇನ್ನೊಂದು ಕಡೆ ಯಾವುದೇ ಪಾಯಿಂಟ್ ನಲ್ಲಿ ಕಡಿತವಾಗಲಿಲ್ಲ. ಸದ್ಯ WTC ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ನಂತರದ ಸ್ಥಾನದಲ್ಲಿ ಭಾರತವಿದೆ .ಅಗ್ರ ಎರಡು ತಂಡಗಳು 2025-2027 WTC ಫೈನಲ್‌ಗೆ ಅರ್ಹತೆ ಪಡೆಯುತ್ತವೆ.
Advertisement