
2025ರ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರ ಮೇಲೆ ಕಣ್ಣಿಡುವಂತೆ ಎಲ್ಲ ಐಪಿಎಲ್ ತಂಡಗಳಿಗೆ ಸಲಹೆ ನೀಡಿದೆ. ಆದರೆ, ನನ್ನ ಮಾತುಗಳನ್ನು ನಿರ್ಲಕ್ಷ್ಯಿಸಲಾಯಿತು ಎಂದು ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. 2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಟಿಮ್ ಡೇವಿಡ್ ಅವರನ್ನು ರಿಲೀಸ್ ಮಾಡಲಾಯಿತು ಮತ್ತು ಬಳಿಕ ನಡೆದ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರನ್ನು ಖರೀದಿಸಿತು. ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿರುವ ಅವರನ್ನು ಆರ್‌ಸಿಬಿ ಕೇವಲ 3 ಕೋಟಿ ರೂ.ಗೆ ಖರೀದಿಸಿತು.
ಈ ನಡೆ ಆರ್‌ಸಿಬಿಗೆ ದಿಟ್ಟ ನಿರ್ಧಾರವಾಗಿ ಪರಿಣಮಿಸಿತು. ಏಕೆಂದರೆ, 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಟಿಮ್ ಡೇವಿಡ್ ಪ್ರಮುಖ ಪಾತ್ರ ವಹಿಸಿದರು. ಐಪಿಎಲ್ 2025 ರಲ್ಲಿ, ಆಸೀಸ್ ತಾರೆ 12 ಪಂದ್ಯಗಳನ್ನು ಆಡಿದರು ಮತ್ತು 185.15ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 187 ರನ್ ಗಳಿಸಿದರು.
ಐಪಿಎಲ್ 2025ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿದ್ದ ಅಶ್ವಿನ್, ಹರಾಜಿನಲ್ಲಿ ಡೇವಿಡ್ ಅವರನ್ನು ಹಿಂಬಾಲಿಸಲು ಎಲ್ಲ ತಂಡಗಳಿಗೆ ಶಿಫಾರಸು ಮಾಡಿದ್ದೆ. ಆದರೆ, ಟಿಮ್ ಡೇವಿಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಖರೀದಿಸಿದ್ದು ಉತ್ತಮ ನಡೆ ಎಂದು ಕರೆದರು.
'ನಾನು ಇದನ್ನು ಹೇಳಬಾರದು ಆದರೆ, ಕೆಲವು ಐಪಿಎಲ್ ತಂಡಗಳ ನಿರ್ಧಾರ ತೆಗೆದುಕೊಳ್ಳುವವರಿಗೆ ಕಳೆದ ಹರಾಜಿಗೂ ಮುನ್ನ ಅವರನ್ನು ಆಯ್ಕೆ ಮಾಡಲು ಹೇಳಿದ್ದೆ. ಅವರೆಲ್ಲರೂ, 'ಇಲ್ಲ, ಅವರ ಆಟ ತೀವ್ರವಾಗಿ ಕುಸಿದಿದೆ' ಎಂದು ಹೇಳಿದರು' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
'ಟಿ20 ಕ್ರಿಕೆಟ್‌ನ ಭವಿಷ್ಯವು ಉದ್ದನೆಯ ಬ್ಯಾಟ್ಸ್‌ಮನ್‌ಗಳು ಮತ್ತು ಬಲವಾದ ಮೈಕಟ್ಟು ಹೊಂದಿರುವವರ ಮೇಲೆ ಇರುತ್ತದೆ ಎಂದು ನಾನು ನಂಬುತ್ತೇನೆ. ವೈಡ್ ಲೈನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ತರದಿದ್ದರೆ, ಅವರು ಪ್ರಾಬಲ್ಯ ಸಾಧಿಸುತ್ತಾರೆ. ಆರ್‌ಸಿಬಿ ಮೂಲ ಬೆಲೆಗೆ (3 ಕೋಟಿ ರೂ.) ಖರೀದಿಸಿದ ಆಟಗಾರನೇ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾನೆ. ಆಸ್ಟ್ರೇಲಿಯಾ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಳುಹಿಸುವುದನ್ನು ನೋಡಲು ಸಂತೋಷವಾಗಿದೆ. ಆರ್‌ಸಿಬಿಗೆ ಇದು ನಿಜವಾದ ಡೀಲ್ ಆಗಿದೆ' ಎಂದು ಅವರು ಹೇಳಿದರು.
ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತು. 191 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಿಬಿಕೆಎಸ್ ಅತ್ಯುತ್ತಮ ಪ್ರದರ್ಶನ ನೀಡಿದರೂ, ಕೇವಲ ಆರು ರನ್‌ಗಳಿಂದ ಸೋತಿತು.
ಟಿಮ್ ಡೇವಿಡ್ ಆಸ್ಟ್ರೇಲಿಯಾದ ತಾರೆಯಾಗಿದ್ದು, ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ವೈಟ್-ಬಾಲ್ ಸರಣಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಅದ್ಭುತ ಕೊಡುಗೆ ನೀಡುತ್ತಿದ್ದಾರೆ.
Advertisement