Venkatesh Prasad
ವೆಂಕಟೇಶ್ ಪ್ರಸಾದ್

ಕಾಲ್ತುಳಿತದ ನಂತರ KSCA ಚುನಾವಣೆ; ಸವಾಲುಗಳ ಮಧ್ಯೆ ಸ್ಪರ್ಧೆಗೆ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಸಿದ್ಧತೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ವೇಳೆ ಜೂನ್‌ನಲ್ಲಿ ನಡೆದ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಘಟನೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಪರಿಣಾಮ ಬೀರಿತ್ತು.
Published on

ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಇದೀಗ ಕರ್ನಾಟಕ ಕ್ರಿಕೆಟ್ ಮಂಡಳಿಯ ಆಡಳಿತಕ್ಕೆ ಮರಳುವತ್ತ ಗಮನ ಹರಿಸಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಕೆಎಸ್‌ಸಿಎ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಸ್ಪರ್ಧಿಸಲಿದ್ದಾರೆ. 56 ವರ್ಷದ ಅವರು ಈ ಹಿಂದೆ 2010ರ ದಶಕದಲ್ಲಿ ಉಪಾಧ್ಯಕ್ಷರಾಗಿದ್ದರು ಮತ್ತು ವಿಶಿಷ್ಟ ಕೋಚಿಂಗ್ ವೃತ್ತಿಜೀವನವನ್ನೂ ಹೊಂದಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾದ ಘಟನೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ವೇಳೆ ಜೂನ್‌ನಲ್ಲಿ ನಡೆದ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಘಟನೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಪರಿಣಾಮ ಬೀರಿತ್ತು. ಚಿನ್ನಸ್ವಾಮಿ ಕ್ರೀಡಾಂಗಣವು ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಎಂದು ಘೋಷಿಸಲಾಯಿತು. ತರುವಾಯ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿ ಮತ್ತು ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಸಹ ಸ್ಥಳಾಂತರಿಸಲಾಯಿತು. ಕೆಎಸ್‌ಸಿಎ ಕಾರ್ಯದರ್ಶಿ ಶಂಕರ್ ಎ ಮತ್ತು ಖಜಾಂಚಿ ಇಎಸ್ ಜೈರಾಮ್ ನೈತಿಕ ಹೊಣೆಗಾರಿಕೆಯನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. ಆದಾಗ್ಯೂ, ರಘುರಾಮ್ ಭಟ್ ಅಧಿಕಾರದಲ್ಲಿಯೇ ಇದ್ದರು, ಅವರ ಅಧಿಕಾರಾವಧಿ ಸೆಪ್ಟೆಂಬರ್ 30 ರಂದು ಕೊನೆಗೊಳ್ಳುತ್ತದೆ.

ಪಿಟಿಐ ವರದಿ ಪ್ರಕಾರ, ಮುಂಬರುವ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಅನುಭವಿ ಆಡಳಿತಾಧಿಕಾರಿ ವಿನಯ್ ಮೃತ್ಯುಂಜಯ ಅವರೊಂದಿಗೆ ಅವರೊಂದಿಗೆ ಕೈಜೋಡಿಸಲಿದ್ದಾರೆ. ಅವರು ಸದ್ಯ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಹಣಕಾಸು ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಈ ಹಿಂದೆ ಕೆಎಸ್‌ಸಿಎಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.

Venkatesh Prasad
ಬೆಂಗಳೂರಿನಲ್ಲಿ ಮತ್ತೊಂದು ಸ್ಟೇಡಿಯಂ: 80,000 ಆಸನ ಸಾಮರ್ಥ್ಯದ ಕ್ರೀಡಾಂಗಣಕ್ಕೆ ಸಿಎಂ ಅನುಮೋದನೆ

ಪ್ರಸಾದ್ ಕೆಎಸ್‌ಸಿಎಗೆ ಹೊಸಬರಲ್ಲ. ಅವರು 2013 ರಿಂದ 2016 ರವರೆಗೆ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದ ವೇಳೆ ಉಪಾಧ್ಯಕ್ಷರಾಗಿದ್ದರು. ಕುಂಬ್ಳೆ ಭಾರತೀಯ ಕೋಚಿಂಗ್ ಹುದ್ದೆಯನ್ನು ವಹಿಸಿಕೊಳ್ಳಲು ಹೊರಟರು. ಆದರೆ, ಪ್ರಸಾದ್ ಸ್ವತಃ ಬೇರೆಡೆ ಅವಕಾಶಗಳನ್ನು ಹುಡುಕುತ್ತಿದ್ದರು. ಅವರು ಪಂಜಾಬ್ ಕಿಂಗ್ಸ್ ಜೊತೆ ಕಾಣಿಸಿಕೊಂಡರು ಮತ್ತು ಪ್ರಸಾರ ಕಾರ್ಯಕ್ರಮಗಳೊಂದಿಗೆ ಹೆಸರು ಮಾಡಿದರು.

ವೆಂಕಟೇಶ್ ಪ್ರಸಾದ್ ಗೆದ್ದರೆ, ಮೊದಲು ಸಂಸ್ಥೆಯ ಮಾನ ಉಳಿಸುವುದು ಆದ್ಯತೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣವು ಭಾರತೀಯ ಕ್ರಿಕೆಟ್‌ಗೆ ಪ್ರಮುಖ ಸ್ಥಳವಾಗಿದ್ದು, ಅದರ ವೈಭವವನ್ನು ಪುನಃಸ್ಥಾಪಿಸುವುದು ಕಾರ್ಯಸೂಚಿಯಲ್ಲಿ ಮೊದಲನೆಯದು. ಭಾರತವು ಟಿ20 ವಿಶ್ವಕಪ್ ಅನ್ನು ಆಯೋಜಿಸುತ್ತದೆ ಮತ್ತು ಬೆಂಗಳೂರು ಈ ಅವಕಾಶವನ್ನು ಕಳೆದುಕೊಂಡರೆ ಅದು ನಾಚಿಕೆಗೇಡಿನ ಸಂಗತಿ. ಆರ್‌ಸಿಬಿ ಕೂಡ ಐಪಿಎಲ್ 2026 ರಲ್ಲಿ ತಮ್ಮ ತವರು ಪಂದ್ಯಗಳನ್ನು ಬೇರೆಡೆ ಆಡುವಂತಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com