
ಮುಂಬೈ: ಮುಂಬರುವ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಅನುಭವಿ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಮುಂಬೈ ತಂಡದ ಸಾಮಾನ್ಯ ಆಟಗಾರನಾಗಿ ಮುಂದುವರೆಯುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಅವರ ನಾಯಕತ್ವದಲ್ಲಿ ಮುಂಬೈ ತಂಡ 2023-24ರಲ್ಲಿ ರಣಜಿ ಟ್ರೋಫಿ ಗೆದ್ದಿತ್ತು. ಅಲ್ಲದೇ ಕಳೆದ ವರ್ಷ 2024-25 ಇರಾನ್ ಕಪ್ ಕೂಡಾ ಮುಡಿಗೇರಿಸಿಕೊಂಡಿತ್ತು. ಅವರ ನಾಯಕತ್ವದಡಿ 2022-23ರಲ್ಲಿ ಸಯ್ಯದ್ ಮುಸ್ತಾಕ್ ಅಲಿ ಟಿ-20 ಪಂದ್ಯಾವಳಿಯನ್ನು ಕೂಡಾ ಮುಂಬೈ ತಂಡ ಗೆದ್ದುಕೊಂಡಿತ್ತು.
ಮುಂಬರುವ ದೇಶೀಯ ಋತುವಿಗಾಗಿ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಇದು ಸಕಾಲ ಎಂದು ಭಾವಿಸುತ್ತೇನೆ. ಆದ್ದರಿಂದ ಮುಂಬೈ ನಾಯಕತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ ಎಂದು ಅವರು ರಹಾನೆ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈ ತಂಡದ ನಾಯಕನಾಗಿ ಹಲವು ಟ್ರೋಫಿಗಳನ್ನು ಗೆದ್ದಿರುವುದು ನನ್ನಗೆ ಸಿಕ್ಕ ಗೌರವವಾಗಿದೆ. ಮುಂಬರುವ ಟೂರ್ನಿಯಲ್ಲಿ ಹೊಸಬರು ನಾಯಕತ್ವ ವಹಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಸಾಮಾನ್ಯ ಆಟಗಾರನಾಗಿ ಅತ್ಯುತ್ತಮ ಆಟ ಆಡಲು ಸಂಪೂರ್ಣ ಬದ್ಧನಾಗಿರುತ್ತೇನೆ. ಮತ್ತಷ್ಟು ಟ್ರೋಫಿ ಗೆಲ್ಲಲು ಮುಂಬೈ ತಂಡದೊಂದಿಗೆ ಮುಂದುವರೆಯುತ್ತೇನೆ ಎಂದು ರಹಾನೆ ಬರೆದುಕೊಂಡಿದ್ದಾರೆ.
37 ವರ್ಷದ ಅಜಿಂಕ್ಯಾ ರಹಾನೆ 201 ಪ್ರಥಮ ದರ್ಜೆಯ ಪಂದ್ಯಗಳನ್ನಾಡಿದ್ದಾರೆ. ಅಜಿಂಕ್ಯ ರಹಾನೆ ಇದುವರೆಗೆ ಮುಂಬೈ ಪರ 76 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 52ರ ಸರಾಸರಿಯಲ್ಲಿ 5932 ರನ್ ಗಳಿಸಿದ್ದಾರೆ. 19 ಶತಕ ಸಿಡಿಸಿದ್ದಾರೆ. ವಾಸಿಮ್ ಜಾಫರ್ ನಂತರ ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಮುಂಬೈ ತಂಡಕ್ಕೆ ಮುಂದಿನ ನಾಯಕ ಯಾರು?: ಮುಂಬೈ ತಂಡದಲ್ಲಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಅವರಂತಹ ಅನುಭವಿ ಆಟಗಾರರಿದ್ದಾರೆ. ಅಯ್ಯರ್ ಮತ್ತು ಸೂರ್ಯಕುಮಾರ್ ಇಬ್ಬರೂ ಮುಂಬೈ ನಾಯಕತ್ವದ ರೇಸ್ಗೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ.
Advertisement