
ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ರಾಜಕಾರಣಿ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಏಥ ಮಾಡಿಕೊಂಡಿದ್ದು, ಇದೀಗ ಸಂದರ್ಶನವೊಂದರಲ್ಲಿ ಸಮಾಜವಾದಿ ಪಕ್ಷದ ಸಂಸದೆಯನ್ನು ಭೇಟಿಯಾಗಿದ್ದು ಹೇಗೆ ಮತ್ತು ಪ್ರೀತಿ ಹೇಗೆ ಶುರುವಾಯಿತು ಎಂಬುದರ ಕುರಿತು ಮಾತನಾಡಿದ್ದಾರೆ. ರಿಂಕು ಸಿಂಗ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದು, ಮುಂಬರುವ ಏಷ್ಯಾಕಪ್ 2025ಕ್ಕೆ ಟೀಂ ಇಂಡಿಯಾದ ಭಾಗವಾಗಿದ್ದಾರೆ.
'2022ರಲ್ಲಿ ಕೋವಿಡ್ ವರ್ಷಗಳಲ್ಲಿ ಮುಂಬೈನಲ್ಲಿ ಐಪಿಎಲ್ ನಡೆಯುತ್ತಿದ್ದಾಗ ಇದು ಪ್ರಾರಂಭವಾಯಿತು. ನನ್ನ ಫ್ಯಾನ್ ಪೇಜ್‌ನಲ್ಲಿ ಪ್ರಿಯಾ ಅವರ ಗ್ರಾಮದಲ್ಲಿನ ಮತದಾನದ ಬಗ್ಗೆ ಫೋಟೊ ಹಾಕಲಾಗಿತ್ತು. ಪ್ರಿಯಾ ಅವರ ಸಹೋದರಿ ಫೋಟೊ ಮತ್ತು ವಿಡಿಯೋಗಳನ್ನು ಪೇಜ್‌ನಲ್ಲಿ ಹಾಕಲು ಫ್ಯಾನ್ ಪೇಜ್ ಅನ್ನು ಕೇಳಿದ್ದಾರೆಂದು ನಾನು ಭಾವಿಸುತ್ತೇನೆ. ನಾನು ಈ ಫೋಟೊ ನೋಡಿದೆ ಮತ್ತು ಆಕೆಯನ್ನು ಇಷ್ಟಪಟ್ಟೆ. ಆಕೆ ನನಗೆ ಪರಿಪೂರ್ಣ ಎಂದು ನಾನು ಭಾವಿಸಿದೆ. ನಾನು ಆಕೆಗೆ ಸಂದೇಶ ಕಳುಹಿಸುವ ಬಗ್ಗೆ ಯೋಚಿಸಿದೆ. ಆದರೆ, ಅದು ಸರಿಯಲ್ಲ ಎಂದು ನಾನು ಭಾವಿಸಿದೆ' ಎಂದು ರಿಂಕು ನ್ಯೂಸ್ 24 ಜೊತೆಗಿನ ಚಾಟ್‌ನಲ್ಲಿ ಹೇಳಿದರು.
ಪ್ರಿಯಾ ಅವರು ಇನ್‌ಸ್ಟಾಗ್ರಾಂನಲ್ಲಿ ನನ್ನ ಕೆಲವು ಪೋಟೊಗಳನ್ನು ಲೈಕ್ ಮಾಡಿದ ನಂತರವೇ ನಾನು ಆಕೆಗೆ ಸಂದೇಶ ಕಳುಹಿಸಿದ್ದಾಗಿ ರಿಂಕು ಬಹಿರಂಗಪಡಿಸಿದ್ದಾರೆ.
'ಅವರು ನನ್ನ ಒಂದೆರಡು ಫೋಟೊಗಳನ್ನು ಲೈಕ್ ಮಾಡಿದರು. ನಂತರ ನಾನು ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿದೆ ಮತ್ತು ಅದು ಹೀಗೆಯೇ ಪ್ರಾರಂಭವಾಯಿತು. ನಂತರ ನಾವು ಮಾತನಾಡಲು ಪ್ರಾರಂಭಿಸಿದೆವು. ಒಂದು ಅಥವಾ ಎರಡು ವಾರಗಳಲ್ಲಿ, ನಾವು ನಿಯಮಿತವಾಗಿ ಮಾತನಾಡುತ್ತಿದ್ದೆವು, ಪಂದ್ಯಕ್ಕೂ ಮುನ್ನ ಮಾತನಾಡುತ್ತಿದ್ದೆವು. ಹಾಗಾಗಿ, 2022 ರಿಂದ ನಾನು ಪ್ರೀತಿಯನ್ನು ಅನುಭವಿಸಲು ಪ್ರಾರಂಭಿಸಿದೆ' ಎಂದು ಹೇಳಿದರು.
ಪ್ರಿಯಾ ಸಂಸದೆಯಾದ ನಂತರವೂ ನಮ್ಮಿಬ್ಬರ ನಡುವೆ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ನಾವು ಪರಸ್ಪರ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದರು.
'ಅಂತಹ ಯಾವುದೇ ಬದಲಾವಣೆಗಳಾಗಿಲ್ಲ; ಆರಂಭದಲ್ಲಿ ಅಷ್ಟೇ, ನಾವು ಬಹಳಷ್ಟು ಮಾತನಾಡುತ್ತಿದ್ದೆವು. ಆದರೆ, ಈಗ ಅದು ಗಮನಾರ್ಹವಾಗಿ ಕಡಿಮೆಯಾಗಿದೆ. ಅವರು ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹಳ್ಳಿಗಳಿಗೆ ಹೋಗುತ್ತಾರೆ, ಜನರೊಂದಿಗೆ ಮಾತನಾಡುತ್ತಾರೆ ಮತ್ತು ಅವರಿಗೆ ಸಹಾಯ ಮಾಡುತ್ತಾರೆ; ಜೊತೆಗೆ ಸಂಸತ್ತಿನಲ್ಲೂ ಪಾಲ್ಗೊಳ್ಳಬೇಕು. ರಾಜಕಾರಣಿಯಾಗಿ ಅವರಿಗೆ ಇಷ್ಟೆಲ್ಲ ಮೂಲಭೂತ ಕೆಲಸಗಳನ್ನು ಮಾಡುವುದು ಮುಖ್ಯವಾಗಿದೆ... ನೀವು ಆಕೆಯ ಇನ್‌ಸ್ಟಾಗ್ರಾಂಗೆ ಹೋದರೆ, ಅವರು ಎಷ್ಟು ಕೆಲಸ ಮಾಡುತ್ತಾರೆಂದು ನೀವು ನೋಡುತ್ತೀರಿ. ಅವರು ಬೆಳಿಗ್ಗೆ ಹೋದರೆ, ರಾತ್ರಿ ಹಿಂತಿರುಗುತ್ತಾರೆ. ಆದ್ದರಿಂದ ನಮಗೆ ಮಾತನಾಡಲು ಹೆಚ್ಚು ಸಮಯ ಸಿಗುವುದಿಲ್ಲ ಮತ್ತು ರಾತ್ರಿಯಲ್ಲಿ ಮಾತ್ರ ಮಾತನಾಡುತ್ತಾರೆ' ಎಂದು ಅವರು ಹೇಳಿದರು.
Advertisement