

ರಾಯ್ಪುರ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದ ಹೊರತಾಗಿಯೂ ಹೀನಾಯ ಸೋಲು ಕಂಡಿದ್ದು, ಭಾರತ ಮಾಡಿದ್ದ ಆ ಒಂದು ತಪ್ಪು ಪಂದ್ಯ ಕೈ ಜಾರುವಂತೆ ಮಾಡಿತು.
ಹೌದು.. ರಾಯ್‌ಪುರದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 359ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಮಾರ್ಕ್ರಾಮ್ (110)ಶತಕ, ಬ್ರೀಟ್ಜ್ಕೆ (68), ಬ್ರೇವಿಸ್ (54 ರನ್) ಅರ್ಧಶತಕ ಮತ್ತು ನಾಯಕ ಬವುಮಾ 46 ರನ್ ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 49.2 ನಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಕಲೆಹಾಕಿ 4 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.
ಈ ಪಂದ್ಯದಲ್ಲಿ ಭಾರತದ ವಿರುದ್ಧ ಮಾರ್ಕ್ರಾಮ್ ಸಿಡಿಲಬ್ಬರದ ಶತಕ ಸಿಡಿಸಿ ಭಾರತದ ಗೆಲುವಿಗೆ ಕಂಟಕರಾದರು. 98 ಎಸೆತಗಳನ್ನು ಎದುರಿಸಿದ ಮಾರ್ಕ್ರಾಮ್ 4 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 110ರನ್ ಕಲೆಹಾಕಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ಕ್ಯಾಚ್ ಡ್ರಾಪ್ ಮಾಡಿದ ಜೈಸ್ವಾಲ್ ಗೆ ಶಾಕ್ ಕೊಟ್ಟ ಮಾರ್ಕ್ರಾಮ್
ಇನ್ನು ಇದು ಮಾರ್ಕ್ರಾಮ್ ಅವರ ನಾಲ್ಕನೇ ಏಕದಿನ ಶತಕವಾಗಿದ್ದು, ಮಾರ್ಕ್ರಾಮ್ ಅವರ ಶತಕದಲ್ಲಿ ಭಾರತದ ಆರಂಭಿಕ ಯಶಸ್ವಿ ಜೈಸ್ವಾಲ್ ಅವರು ಪ್ರಮುಖ ಪಾತ್ರ ವಹಿಸಿದರು. ವಾಸ್ತವವಾಗಿ ಮಾರ್ಕ್ರಾಮ್ 53 ರನ್‌ಗಳಿಸಿ ಆಡುತ್ತಿದ್ದಾಗ ಲಾಂಗ್-ಆನ್ ಬೌಂಡರಿಯಲ್ಲಿ ಜೈಸ್ವಾಲ್ಗೆ ಸರಳ ಕ್ಯಾಚ್ ನೀಡಿದ್ದರು. ಆದರೆ ಜೈಸ್ವಾಲ್ ಆ ಕ್ಯಾಚ್ ಅನ್ನು ಕೈ ಚೆಲಿದರು.
ನಂತರ ಮತ್ತೊಂದು ಅವಕಾಶ ನೀಡಿದ ಮಾರ್ಕ್ರಾಮ್ ಆರಂಭಿಕ ಆಟಗಾರನಾಗಿ ತಮ್ಮ ಮೊದಲ ಶತಕ ಮತ್ತು ಭಾರತದ ವಿರುದ್ಧ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.
ರಾಯ್ಪುರ್ ಪಂದ್ಯದಲ್ಲಿ ಕಳಪೆ ಆರಂಭ ಪಡೆದ ಐಡೆನ್ ಮಾರ್ಕ್ರಾಮ್, ಹಲವಾರು ಬಾರಿ ಔಟಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಆದರೆ ಆ ಬಳಿಕ ಲಯ ಕಂಡುಕೊಂಡ ಮಾರ್ಕ್ರಾಮ್ 52 ಎಸೆತಗಳಲ್ಲಿ ತಮ್ಮ ಅರ್ಧಶತಕ ಮತ್ತು 88 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸಿದರು.
ಆದಾಗ್ಯೂ ಶತಕದ ನಂತರ ಹೊಡಿಬಡಿ ಆಟಕ್ಕೆ ಮುಂದಾದ ಮಾರ್ಕ್ರಾಮ್ 98 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 110 ರನ್ ಬಾರಿಸಿ ಹರ್ಷಿತ್ ರಾಣಾಗೆ ಬಲಿಯಾದರು.
Advertisement