

ವಿಶಾಖಪಟ್ಟಣಂ: ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಚೈನಾಮನ್ ಕುಲದೀಪ್ ಯಾದವ್ ಅವರ ಭರ್ಜರಿ ಬೌಲಿಂಗ್ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 270 ರನ್ ಗಳಿಗೆ ಆಲೌಟ್ ಮಾಡಿದೆ.
ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಣಗದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿಕಾಕ್ (106) ಶತಕ ಮತ್ತು ನಾಯಕ ಟೆಂಬಾ ಬೆವುಮಾ (48) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 47.5 ಓವರ್ ನಲ್ಲಿ 270ರನ್ ಗಳಿಗೆ ಆಲೌಟ್ ಆಗಿದೆ.
ಮಧ್ಯಮ ಕ್ರಮಾಂಕದ ಕುಸಿತ
ಇನ್ನು ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ 26 ಓವರ ನಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 6.07 ರನ್ ಸರಾಸರಿಯಲ್ಲಿ 158 ರನ್ ಪೇರಿಸಿತ್ತು. ಹೀಗಾಗಿ ಈ ಪಂದ್ಯದಲ್ಲೂ ಕೂಡ 350+ ರನ್ ಟಾರ್ಗೆಟ್ ನಿರೀಕ್ಷಿಸಲಾಗಿತ್ತು.
ಆದರೆ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ನಾಯಕ ಟೆಂಬಾ ಬವುಮಾ ಅವರ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿತು. 106 ರನ್ ಗಳಿಸಿ ಅಪಾಯಕಾರಿಯಾಗಿ ಮಾರ್ಪಟ್ಟಿದ್ದ ಕ್ವಿಂಟನ್ ಡಿಕಾಕ್ ಪ್ರಸಿದ್ಧ್ ಕೃಷ್ಣಅವರ ಅದ್ಭುತ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಾಯಕ ಬವುಮಾ ಕೂಡ 48 ರನ್ ಗಳಿಸಿದ್ದ ವೇಳೆ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಡಿಕಾಕ್ ಮತ್ತು ಬವುಮಾ ಔಟ್ ಆಗುತ್ತಲೇ ದಕ್ಷಿಣ ಆಫ್ರಿಕಾದ ಪತನ ಕೂಡ ಆರಂಭವಾಯಿತು. 24 ರನ್ ಗಳಿಸಿದ್ದ ಬ್ರೀಟ್ಸ್ಕೆ ಪ್ರಸಿದ್ ಕೃಷ್ಣ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರೆ, ಮಾರ್ಕ್ರಾಮ್ ಅದೇ ಓವರ್ ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಬಂದಷ್ಟೇ ವೇಗವಾಗಿ ಹೊರ ನಡೆದರು. ಡಿವಾಲ್ಡ್ ಬ್ರೇವಿಸ್ 29 ರನ್ ಗಳಿಸಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರೆ, ಮಾರ್ಕೋ ಜಾನ್ಸೆನ್ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಕೇಶವ್ ಮಹಾರಾಜ್ ಏಕಾಂಗಿ ಹೋರಾಟ
ಒಂದೆಡೆ ದಕ್ಷಿಣ ಆಫ್ರಿಕಾದ ಕೆಲ ಕ್ರಮಾಂಕದ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರೆ, ಮತ್ತೊಂದೆಡೆ ಕೇಶವ್ ಮಹಾರಾಜ್ (20) ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ ಅಜೇಯರಾಗಿ ಉಳಿದರು.
ಇನ್ನು ಭಾರತದ ಪರ ಪ್ರಸಿದ್ಧ್ ಕೃಷ್ಣ ಮತ್ತು ಕುಲದೀಪ್ ಯಾದವ್ ತಲಾ 4 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
Advertisement