

ಪ್ರಸಾರಕ ಜಿಯೋಸ್ಟಾರ್ ಮಾಧ್ಯಮ ಹಕ್ಕುಗಳ ಒಪ್ಪಂದದಿಂದ ಅವಧಿಗೂ ಮುನ್ನವೇ ಹೊರಬರುವ ನಿರ್ಧಾರವನ್ನು ಜಾಗತಿಕ ಸಂಸ್ಥೆಗೆ ಔಪಚಾರಿಕವಾಗಿ ತಿಳಿಸಿರುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸದ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ವರದಿಯಾಗಿದೆ. 2024/27ರ ಅವಧಿಯ ಮಾಧ್ಯಮ ಹಕ್ಕುಗಳ ಮೌಲ್ಯ $3 ಬಿಲಿಯನ್ ಆಗಿತ್ತು. ಈ ಒಪ್ಪಂದದಿಂದ ಮೊದಲೇ ಹೊರಬರಲು ಜಿಯೋಸ್ಟಾರ್ ನಿರ್ಧರಿಸಿದ ಪರಿಣಾಮವಾಗಿ, ಉಳಿದ ಎರಡು ವರ್ಷಗಳಿಗೆ ಮಾಧ್ಯಮ ಹಕ್ಕುಗಳನ್ನು ಖರೀದಿಸಲು ಐಸಿಸಿ ಈಗ ಇತರ ವೇದಿಕೆಗಳನ್ನು ಸಂಪರ್ಕಿಸಿದೆ.
ಎಕನಾಮಿಕ್ ಟೈಮ್ಸ್ ಪ್ರಕಾರ, ಜಿಯೋಸ್ಟಾರ್ ತೀವ್ರ ಆರ್ಥಿಕ ನಷ್ಟದಿಂದಾಗಿ 4 ವರ್ಷಗಳ ಒಪ್ಪಂದದ ಉಳಿದ ಅವಧಿಯನ್ನು ಪೂರ್ಣಗೊಳಿಸುವಲ್ಲಿನ ತನ್ನ ಅಸಮರ್ಥತೆಯನ್ನು ಐಸಿಸಿಗೆ ತಿಳಿಸಿದೆ. ಐಸಿಸಿ ಈಗ 2026–29ರ ಭಾರತದ ಮಾಧ್ಯಮ ಹಕ್ಕುಗಳಿಗಾಗಿ ಹೊಸ ಮಾರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮೂಲಗಳ ಪ್ರಕಾರ, ಸುಮಾರು $2.4 ಬಿಲಿಯನ್ ಅನ್ನು ಕೋರಿದೆ. ಜಾಗತಿಕ ಸಂಸ್ಥೆಯು ಎರಡು ವರ್ಷಗಳ ಅವಧಿಗೆ ಒಪ್ಪಂಧ ಮಾಡಿಕೊಳ್ಳಲು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋದಂತಹ ಇತರ ವೇದಿಕೆಗಳನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ.
ಬೆಲೆ ನಿಗದಿಯ ಸಮಸ್ಯೆಯಿಂದಾಗಿ ಯಾವುದೇ ವೇದಿಕೆಗಳು ಇಲ್ಲಿಯವರೆಗೆ ಆಸಕ್ತಿ ತೋರಿಸಿಲ್ಲ ಎಂದು ವರದಿ ಹೇಳುತ್ತದೆ, ಇದು ಐಸಿಸಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದಲ್ಲದೆ, ಈ ವರ್ಷದ ಆರಂಭದಲ್ಲಿ ರಿಯಲ್-ಮನಿ ಗೇಮಿಂಗ್ ನಿಷೇಧದ ನಂತರ ಜಿಯೋಸ್ಟಾರ್‌ನ ಒತ್ತಡ ತೀವ್ರಗೊಂಡಿದೆ ಎಂದು ವರದಿ ಹೇಳುತ್ತದೆ.
ಜಿಯೋಸ್ಟಾರ್ 2024–25ರಲ್ಲಿ ಲಾಭದಾಯಕವಲ್ಲದ ದುಬಾರಿ ಕ್ರೀಡಾ ಒಪ್ಪಂದಗಳಿಂದ ನಿರೀಕ್ಷಿತ ನಷ್ಟವನ್ನು ಸರಿದೂಗಿಸಲು ಹೆಚ್ಚಿನ ಹಣವನ್ನು ಮೀಸಲಿಟ್ಟಿದೆ. ಕಳೆದ ವರ್ಷ, ಅವರು ಈ ನಿರೀಕ್ಷಿತ ನಷ್ಟಗಳಿಗಾಗಿ ₹12,319 ಕೋಟಿಗಳನ್ನು ಇಟ್ಟುಕೊಂಡಿದ್ದರು. ಈ ವರ್ಷ, ಅವರು ಅದನ್ನು ₹25,760 ಕೋಟಿಗೆ ಹೆಚ್ಚಿಸಿದ್ದಾರೆ. ಇದು ಎರಡು ಪಟ್ಟು ಹೆಚ್ಚಾಗಿದೆ.
2026ರ ಟಿ20 ವಿಶ್ವಕಪ್ ಫೆಬ್ರುವರಿಯಲ್ಲಿ ಪ್ರಾರಂಭವಾಗಲಿದ್ದು, ಜಿಯೋಸ್ಟಾರ್ ಒಪ್ಪಂದದಿಂದ ಅಕಾಲಿಕವಾಗಿ ಹಿಂದೆ ಸರಿದಿರುವುದರಿಂದ ಕಡಿಮೆ ಅವಧಿಯಲ್ಲಿ ಐಸಿಸಿ ಈಗ ಹೊಸ ಮಾಧ್ಯಮ ಪಾಲುದಾರರನ್ನು ಹುಡುಕುವುದು ಸವಾಲಾಗಿ ಪರಿಣಮಿಸಿದೆ.
Advertisement