

ಅಬುದಾಬಿ: ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮಿನಿ ಹರಾಜಿನಲ್ಲಿ ಭಾರತದ ತಾರೆಯರಾದ ಪೃಥ್ವಿ ಶಾ ಮತ್ತು ಸರ್ಫರಾಜ್ ಖಾನ್ ಅನ್‌ಸೋಲ್ಡ್ ಆಗಿ ಉಳಿದಿದ್ದರೂ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ದಾಖಲೆಯ ₹25.20 ರೂ.ಗಳಿಗೆ ಆಸ್ಟ್ರೇಲಿಯಾದ ಅಗ್ರ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿ ಮಾಡಿತು.
ಗ್ರೀನ್ ತಮ್ಮ ದೇಶದವರೇ ಆದ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಅವರನ್ನು ಹಿಂದಿಕ್ಕಿ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿ ಮಾಡಲು ತೀವ್ರ ಬಿಡ್ಡಿಂಗ್‌ನಲ್ಲಿ ತೊಡಗಿಕೊಂಡ ನಂತರ ಅಂತಿಮವಾಗಿ ಕೆಕೆಆರ್ ತಂಡಕ್ಕೆ ಗ್ರೀನ್ ಬಿಕರಿಯಾದರು.
ಇತ್ತ ತಾವೇ ಕೈಬಿಟ್ಟಿದ್ದ ವೆಂಕಟೇಶ್ ಅಯ್ಯರ್ ಅವರನ್ನು ತಮ್ಮ ತಂಡಕ್ಕೆ ಖರೀದಿಸಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಿಡ್ಡಿಂಗ್‌ನಲ್ಲಿ ತೊಡಗಿತು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅಂತಿಮವಾಗಿ ಭಾರತದ ಆಲ್‌ರೌಂಡರ್ ಅನ್ನು 7 ಕೋಟಿ ರೂ.ಗೆ ಪಡೆದುಕೊಂಡಿತು.
ಕ್ಯಾಮರೂನ್ ಗ್ರೀನ್ ಅತ್ಯಂತ ದುಬಾರಿ ಆಟಗಾರನಾಗಿದ್ದರೂ, ಈ ಆವೃತ್ತಿಯಲ್ಲಿ ಅವರ ಸಂಬಳ ₹18 ಕೋಟಿ ಆಗಿರುತ್ತದೆ. ಏಕೆಂದರೆ, ವಿದೇಶಿ ಆಟಗಾರರ ಹರಾಜಿನ ನಿಯಮಗಳ ಪ್ರಕಾರ, ಉಳಿದ ಮೊತ್ತವು ಬಿಸಿಸಿಐನ ಆಟಗಾರರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೋಗುತ್ತದೆ.
ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಗ್ರೀನ್, ಇದುವರೆಗೆ ಐಪಿಎಲ್‌ನಲ್ಲಿ 29 ಪಂದ್ಯಗಳನ್ನು ಆಡಿದ್ದು, 707 ರನ್‌ಗಳನ್ನು ಗಳಿಸಿದ್ದಾರೆ ಮತ್ತು 16 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರೂ ಪೃಥ್ವಿ ಶಾ ಯಾವುದೇ ತಂಡಕ್ಕೆ ಬಿಕರಿಯಾಗಲಿಲ್ಲ ಮತ್ತು ಮಂಗಳವಾರ ಮುಂಬೈ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ 22 ಎಸೆತಗಳಲ್ಲಿ 73 ರನ್ ಗಳಿಸಿದ ಸರ್ಫರಾಜ್ ಖಾನ್ ವಿಷಯದಲ್ಲೂ ಇದೇ ರೀತಿ ಆಯಿತು.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ತಂಡವು ಮೂಲ ಬೆಲೆ ₹2 ಕೋಟಿಗೆ ಖರೀದಿಸಿತು. ನ್ಯೂಜಿಲೆಂಡ್‌ನ ಸ್ವಾಶ್‌ಬಕ್ಲರ್ ಡೆವೊನ್ ಕಾನ್ವೇ ಅವರ ಮೂಲ ಬೆಲೆ ₹2 ಕೋಟಿ ಆಗಿದ್ದು, ಹರಾಜಿನಲ್ಲಿ ಮಾರಾಟವಾಗಲಿಲ್ಲ. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ ತಂಡಕ್ಕೆ 1 ಕೋಟಿ ರೂ. ಮೂಲ ಬೆಲೆಗೆ ಮರಳಿದರು.
ಒಟ್ಟು 359 ಆಟಗಾರರು (246 ಭಾರತೀಯರು ಮತ್ತು 113 ವಿದೇಶಿ ಆಟಗಾರರು) ಮಿನಿ ಹರಾಜಿನ ಭಾಗವಾಗಿದ್ದಾರೆ. 10 ಫ್ರಾಂಚೈಸಿಗಳು ಗರಿಷ್ಠ 77 ಸ್ಥಾನಗಳನ್ನು ತುಂಬಲು ಬಿಡ್ ಮಾಡಿದ್ದು, ಇದರಲ್ಲಿ 31 ವಿದೇಶಿ ಆಟಗಾರರಿಗೆ ಮೀಸಲಾಗಿವೆ.
Advertisement