ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಹೊಸ ಸೆನ್ಸೇಷನ್ ಕಾರ್ತಿಕ್ ಶರ್ಮಾ ಅವರ ಪ್ರಯಾಣವು ಅಷ್ಟೇನು ಉತ್ತಮವಾಗಿರಲಿಲ್ಲ. ಒಂದು ಕಾಲದಲ್ಲಿ ಹಣದ ಕೊರತೆಯಿಂದಾಗಿ ಹಸಿವಿನಿಂದ ಮಲಗುತ್ತಿದ್ದ ಮತ್ತು ರಾತ್ರಿ ಆಶ್ರಯದಲ್ಲಿ ಉಳಿಯುತ್ತಿದ್ದ ಕಾರ್ತಿಕ್, ಮಂಗಳವಾರ ಅಬುದಾಬಿಯಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ ₹14.20 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಆಯ್ಕೆಯಾಗಿದ್ದು, ಐಪಿಎಲ್ ಹರಾಜಿನಲ್ಲಿ ಬಿಕರಿಯಾದ ಭಾರತದ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ರಾಜಸ್ಥಾನದ ಭರತ್‌ಪುರದವರಾದ ಕಾರ್ತಿಕ್, ಇದೀಗ ತಮ್ಮ ಎಲ್ಲ ಸಂಕಷ್ಟಗಳಿಗೂ ತಕ್ಕ ಪ್ರತಿಫಲ ಪಡೆದಿದ್ದಾರೆ.
ಸಾಧಾರಣ ಜೀವನ ನಡೆಸುವ ಕಾರ್ತಿಕ್ ಅವರ ತಂದೆ ಮನೋಜ್ ಶರ್ಮಾ, ತಮ್ಮ ಮಗನ ಯಶಸ್ಸಿನ ಹಿಂದಿನ ಕಷ್ಟಗಳನ್ನು ನೆನಪಿಸಿಕೊಂಡರು. 'ನಮ್ಮ ಆದಾಯ ಸೀಮಿತವಾಗಿತ್ತು, ಆದರೆ ನನ್ನ ಹೆಂಡತಿ ರಾಧಾ ಮತ್ತು ನಾನು ಒಂದು ಕನಸನ್ನು ಕಂಡೆವು. ಎಷ್ಟೇ ವೆಚ್ಚವಾದರೂ ಕಾರ್ತಿಕ್ ಅನ್ನು ಕ್ರಿಕೆಟಿಗನನ್ನಾಗಿ ಮಾಡಬೇಕೆಂದು ಪಣ ತೊಟ್ಟೆವು' ಎಂದು ಐಎಎನ್‌ಎಸ್‌ಗೆ ತಿಳಿಸಿದರು.
ಕಾರ್ತಿಕ್ ನ ತರಬೇತಿ ಮತ್ತು ಪಂದ್ಯಾವಳಿಗಳನ್ನು ಬೆಂಬಲಿಸಲು, ಕುಟುಂಬವು ಬಹ್ನೇರಾ ಗ್ರಾಮದಲ್ಲಿ ತಮ್ಮ ನಿವೇಶನಗಳು ಮತ್ತು ಕೃಷಿ ಭೂಮಿಯನ್ನು ಮಾರಿತು. ಕಾರ್ತಿಕ್‌ನ ತಾಯಿ ತನ್ನ ಆಭರಣಗಳನ್ನು ಮಾರಿದರು. 'ಅದು ನಮ್ಮ ಜೀವನದ ಸವಾಲಿನ ಹಂತವಾಗಿತ್ತು. ಆದರೆ, ಕಾರ್ತಿಕ್‌ನ ಕನಸನ್ನು ಮುರಿಯಲು ನಾವು ಎಂದಿಗೂ ಬಿಡಲಿಲ್ಲ' ಎಂದು ಮನೋಜ್ ಹೇಳಿದರು.
ಕಾರ್ತಿಕ್ ಅವರ ಪ್ರಯಾಣದ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಒಂದು ಗ್ವಾಲಿಯರ್‌ನಲ್ಲಿ ನಡೆದ ಪಂದ್ಯಾವಳಿಯ ಸಂದರ್ಭದಲ್ಲಿ ಬಂದಿತು. ತನ್ನ ಮಗನ ತಂಡವು ನಾಲ್ಕು ಅಥವಾ ಐದು ಪಂದ್ಯಗಳ ಬಳಿಕ ಟೂರ್ನಿಯಿಂದ ಹೊರಬೀಳುತ್ತದೆ ಎಂದು ನಿರೀಕ್ಷಿಸಿದರು. ಆದರೆ, ಕಾರ್ತಿಕ್ ಅವರ ಪ್ರದರ್ಶನ ತಂಡವನ್ನು ಫೈನಲ್‌ಗೆ ಕರೆದೊಯ್ದಿತು. ಹಣ ಇಲ್ಲದ ಕಾರಣ, ತಂದೆ ಮತ್ತು ಮಗ ರಾತ್ರಿ ಆಶ್ರಯ ತಾಣದಲ್ಲಿ ಇರಬೇಕಾಯಿತು. 'ನಾವು ಹಸಿವಿನಿಂದ ಮಲಗಬೇಕಾದ ದಿನವಿತ್ತು. ಫೈನಲ್ ಗೆದ್ದ ನಂತರ ಮತ್ತು ಬಹುಮಾನದ ಹಣವನ್ನು ಪಡೆದ ನಂತರವೇ ನಾವು ಮನೆಗೆ ಮರಳಲು ಸಾಧ್ಯವಾಯಿತು' ಎಂದು ಮನೋಜ್ ನೆನಪಿಸಿಕೊಂಡರು.
ಕಾರ್ತಿಕ್ ಅವರ ಕ್ರಿಕೆಟ್ ಪ್ರತಿಭೆ ಚಿಕ್ಕಂದಿನಿಂದಲೇ ಸ್ಪಷ್ಟವಾಗಿತ್ತು. ಕೇವಲ ಎರಡೂವರೆ ವರ್ಷ ವಯಸ್ಸಿನಲ್ಲಿ, ಅವರು ಬ್ಯಾಟ್ ಎತ್ತಿಕೊಂಡು ಚೆಂಡನ್ನು ಎಷ್ಟು ಬಲವಾಗಿ ಹೊಡೆದರು ಎಂದರೆ ಅದು ಮನೆಯಲ್ಲಿ ಎರಡು ಫೋಟೋ ಫ್ರೇಮ್‌ಗಳನ್ನು ಮುರಿದು ಹಾಕಿತು. 'ಆ ಕ್ಷಣ ಅವರು ವಿಶೇಷ ಎಂದು ನಮಗೆ ನಂಬುವಂತೆ ಮಾಡಿತು' ಎಂದು ಅವರ ತಂದೆ ಹೇಳಿದರು.
ಕುತೂಹಲಕಾರಿಯಾಗಿ, ಮನೋಜ್ ಕೂಡ ಒಮ್ಮೆ ಕ್ರಿಕೆಟಿಗರಾಗಿದ್ದರು. ಆದರೆ, ಗಾಯವು ಅವರ ಆಟದ ದಿನಗಳನ್ನು ಕೊನೆಗೊಳಿಸಿತು. 'ನನ್ನ ಕನಸನ್ನು ಪೂರ್ಣಗೊಳಿಸಲು ನನಗೆ ಸಾಧ್ಯವಾಗಲಿಲ್ಲ, ಆದ್ದರಿಂದ ನನ್ನ ಮಗ ಅದನ್ನು ಮಾಡಬೇಕೆಂದು ನಾನು ನಿರ್ಧರಿಸಿದೆ'. ಈಗ ಕಲ್ಪನೆಗೂ ಮೀರಿದ ಕನಸು ನನಸಾಗಿದೆ ಎಂದು ಅವರು ಹೇಳಿದರು.
ಆರಂಭಿಕ ಭರವಸೆಯ ಹೊರತಾಗಿಯೂ, ಕಾರ್ತಿಕ್ ಅವರ ಪ್ರಯಾಣವು ಸುಗಮವಾಗಿರಲಿಲ್ಲ. ಅವರು ಅಂಡರ್-14 ಮತ್ತು ಅಂಡರ್-16 ಹಂತಗಳಲ್ಲಿ ಆಡಿದರು. ಆದರೆ, ನಂತರ ನಾಲ್ಕು ವರ್ಷಗಳ ಕಾಲ ಆಯ್ಕೆಯಿಲ್ಲದೆ ಕಳೆದರು. 'ನಾನು ಆಟವಾಡುತ್ತಲೇ ಇದ್ದೆ. ನನ್ನ ತಂದೆ ನನಗೆ ತರಬೇತಿ ನೀಡುತ್ತಲೇ ಇದ್ದರು. ಅಂತಿಮವಾಗಿ, ನಾನು ಅಂಡರ್-19, ನಂತರ ರಣಜಿ ಟ್ರೋಫಿಗೆ ಆಯ್ಕೆಯಾದೆ' ಎಂದು ಕಾರ್ತಿಕ್ IANS ಗೆ ತಿಳಿಸಿದರು.
ದೇಶೀಯ ಮಟ್ಟದಲ್ಲಿ ಅವರ ಬಲವಾದ ಪ್ರದರ್ಶನವು ಅಂತಿಮವಾಗಿ ಐಪಿಎಲ್‌ಗೆ ಬಾಗಿಲು ತೆರೆಯಿತು. ಅವರ ಹಠಾತ್ ಖ್ಯಾತಿಯ ಹೊರತಾಗಿಯೂ, ಕಾರ್ತಿಕ್ ಈ ವರ್ಷ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಪದವಿ ಪಡೆಯಲು ಉದ್ದೇಶಿಸಿದ್ದಾರೆ. 'ನನ್ನ ಅಧ್ಯಯನ ನನಗೆ ಮುಖ್ಯವಾಗಿದೆ' ಎಂದು ಅವರು ಹೇಳಿದರು. ಕಾರ್ತಿಕ್ ಅವರ ಕಿರಿಯ ಸಹೋದರ ಕ್ರಿಕೆಟ್ ಆಡುತ್ತಿದ್ದರೆ, ಅವರ ಮಧ್ಯಮ ಸಹೋದರ ಶೈಕ್ಷಣಿಕ ವಿಷಯಗಳತ್ತ ಗಮನಹರಿಸಿದ್ದಾರೆ.
Advertisement