ಭಾರತದ 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಭಾನುವಾರ ದುಬೈನಲ್ಲಿ ಪಾಕಿಸ್ತಾನ ವಿರುದ್ಧ ನಡೆದ U-19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರು. ಭಾರತ 348 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ, ಸೂರ್ಯವಂಶಿ ಉತ್ತಮ ಆರಂಭ ನೀಡಿದರಾದರೂ, ಅದನ್ನು ಹೆಚ್ಚಿನ ರನ್ ಆಗಿ ಬದಲಿಸಲು ಸಾಧ್ಯವಾಗಲಿಲ್ಲ. ತಾವು ಎದುರಿಸಿದ ಮೊದಲ 10 ಎಸೆತಗಳಲ್ಲಿ 24 ರನ್ ಗಳಿಸಿದರು. ಆದಾಗ್ಯೂ, ವೇಗಿ ಅಲಿ ರಝಾ ಅವರ ಶಾರ್ಟ್ ಪಿಚ್ ಎಸೆತದಲ್ಲಿ ಔಟಾದರು. ಆಗ ಭಾರತ ಮೂರು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತ್ತು.
ಸೂರ್ಯವಂಶಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುವ ವೇಳೆ ವೇಗಿ ಅಲಿ ರಝಾ ಅವರು ಸಂಭ್ರಮಾಚರಣೆಯಲ್ಲಿ ಬಿರುಸಿನ ಬೀಳ್ಕೊಡುಗೆ ನೀಡಿದರು. ಈ ವೇಳೆ, ತಾಳ್ಮೆ ಕಳೆದುಕೊಂಡ ವೈಭವ್ ಸೂರ್ಯವಂಶಿ ಮತ್ತು ಪಾಕಿಸ್ತಾನದ ಆಟಗಾರ ರಝಾ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಅವರು ತಮ್ಮ ಶೂ ಕಡೆಗೆ ಬೆರಳು ತೋರಿಸುತ್ತಾ ಕೆಲವು ಸನ್ನೆಗಳನ್ನು ಮಾಡುತ್ತಿರುವುದು ಸಹ ಕಂಡುಬಂದಿತು.
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಪರ ಸಮೀರ್ ಮಿನ್ಹಾಸ್ ಮತ್ತೊಮ್ಮೆ ತಮ್ಮ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯಾವಳಿಯ ಎರಡನೇ ಶತಕ ಗಳಿಸಿದ ಅವರು, 113 ಎಸೆತಗಳಲ್ಲಿ 172 ರನ್ ಗಳಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿತು.
ಕಳೆದ ಆವೃತ್ತಿಯ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಎಂಟು ವಿಕೆಟ್‌ಗಳ ಸೆಮಿಫೈನಲ್ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ ಪಾಕಿಸ್ತಾನ, ಭಾರತದ ಬೌಲರ್‌ಗಳ ಬೆವರಿಳಿಸಿತು.
ಪಾಕ್ ನೀಡಿದ 348 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ಆಯುಷ್ ಮ್ಹಾತ್ರೆ 7 ಎಸೆತಗಳಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಆರನ್ ಜಾರ್ಜ್ 9 ಎಸೆತಗಳಲ್ಲಿ 16 ರನ್ ಗಳಿಸಿದರು. ವಿಹಾನ್ ಮಲ್ಹೋತ್ರ 7, ವೇದಾಂತ್ ತ್ರಿವೇದಿ 9, ಅಭಿಜ್ಞಾನ್ ಕುಂಡು 13, ಕನಿಷ್ಕ್ ಚೌಹಾಣ್ 9, ಖಿಲಾನ್ ಪಟೇಲ್ 19, ಹೆನಿಲ್ ಪಟೇಲ್ 6 ರನ್ ಗಳಿಸಿದರು.
Advertisement