

ಕರಾಚಿ: ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನ ತಂಡಕ್ಕೆ ಅದ್ದೂರಿ ಸ್ವಾಗತ ನೀಡಲಾಗಿದೆ. ಅಪರೂಪಕ್ಕೆ ಎಂಬಂತೆ ಬದ್ದ ವೈರಿಗಳ ವಿರುದ್ಧ ಗೆದ್ದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಮಧ್ಯೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಕೂಡಾ ವಿಜೇತ ತಂಡಕ್ಕೆ ಅದ್ದೂರಿ ಸ್ವಾಗತ ಕೋರಲಿದ್ದಾರೆ ಎನ್ನಲಾಗಿದೆ.
ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಸಾಮಾನ್ಯವಾಗಿ ಹಿರಿಯ ತಂಡಗಳಿಗೆ ಮಾತ್ರ ಇಂತಹ ಸ್ವಾಗತ ಕೋರುವ ಸಂಪ್ರದಾಯ ಇತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗಾಗಲೇ ಈ ಗೆಲುವನ್ನು ದೇಶದ ಆಟದ ಪ್ರಮುಖ ಸಾಧನೆ ಎಂದು ಘೋಷಿಸಿದ್ದಾರೆ.
ಭಾನುವಾರ ನಡೆದ ಫೈನಲ್‌ನಲ್ಲಿ 172 ರನ್ ಗಳಿಸಿದ ಸಮೀರ್ ಮಿನ್ಹಾಸ್ ಮತ್ತು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ವೇಗದ ಬೌಲರ್ ಅಲಿ ರೆಜಾ ಅವರನ್ನು ಪ್ರಶಂಸಿಸಲಾಗುತ್ತಿದೆ.
ಪಾಕಿಸ್ತಾನದಲ್ಲಿ ಅಂಡರ್-19 ಕ್ರಿಕೆಟ್ ಗೆ ಅಷ್ಟೇನೂ ಮಹತ್ವ ಇರಲಿಲ್ಲ. ಆದರೆ ಈ ಬಾರಿ ಭಾರತ ವಿರುದ್ಧ ಗೆದ್ದಿರುವುದರಿಂದ ದೇಶಾದ್ಯಂತ ವಿಜಯೋತ್ಸವ ಆಚರಿಸಲಾಗುತ್ತಿದೆ.
ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆದ ಹಿರಿಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಪಾಕ್ ವಿರುದ್ಧ ಗೆದ್ದ ಭಾರತ ತಂಡದ ಆಟಗಾರರು, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಮುಖ್ಯಸ್ಥರು ಮತ್ತು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಫೆಡರಲ್ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು. ಈ ವಿಚಾರ ಇನ್ನೂ ಬಗೆಹರಿಯದ ಹಿನ್ನೆಲೆಯಲ್ಲಿ ಟ್ರೋಫಿ ಇನ್ನೂ ದುಬೈನ ಎಸಿಸಿ ಕಚೇರಿಯಲ್ಲಿಯೇ ಇದೆ.
ಈ ಮಧ್ಯೆ ಅಂಡರ್-19 ಏಷ್ಯಾ ಕಪ್ ಗೆದ್ದ ಪಾಕ್ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಕಂಡು ಕೇಳಿರದಷ್ಟು ತಲಾ ಐದು ಮಿಲಿಯನ್ PKR ನಗದು ಬಹುಮಾನವನ್ನು ನಖ್ವಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
Advertisement