

ದುಬೈನಲ್ಲಿ ನಡೆದ U19 ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮೊಹ್ಸಿನ್ ನಖ್ವಿ ಕೈಯಿಂದ ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸಲು ಯುವ ಭಾರತೀಯ ಪಡೆ ನಿರಾಕರಿಸಿದೆ.
ಮೊಹ್ಸಿನ್ ನಖ್ವಿ ಪಾಕಿಸ್ತಾನ ತಂಡಕ್ಕೆ ಟ್ರೋಫಿಯನ್ನು ಪ್ರದಾನ ಮಾಡಿದ್ದು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸಂಭ್ರಮಾಚರಣೆಯ ಫೋಟೋಗಳಿಗೆ ಪೋಸ್ ನೀಡಿದರು. ಆದಾಗ್ಯೂ, ಭಾರತೀಯ ಆಟಗಾರರು ವೇದಿಕೆಯನ್ನು ಹಂಚಿಕೊಳ್ಳಲು ನಿರಾಕರಿಸಿದರು. ಫೈನಲ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 347 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ವೈಭವ್ ಸೂರ್ಯವಂಶಿ ಭಾರತಕ್ಕೆ ಆಕ್ರಮಣಕಾರಿ ಆರಂಭವನ್ನು ನೀಡಿದರು. ಆದರೆ ಭಾರತೀಯ ಇನ್ನಿಂಗ್ಸ್ ಶೀಘ್ರದಲ್ಲೇ ಕುಸಿಯಿತು. ಫೈನಲ್‌ನ ಒತ್ತಡವನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ನಿಭಾಯಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಭಾರತ ತಂಡವು ಕೇವಲ 156 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನವು 191 ರನ್‌ಗಳ ಬೃಹತ್ ಗೆಲುವಿನೊಂದಿಗೆ U19 ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿತ್ತು.
ಫೈನಲ್ ಪಂದ್ಯದ ಸಮಯದಲ್ಲಿ ಮೊಹ್ಸಿನ್ ನಖ್ವಿ ದುಬೈಗೆ ಆಗಮಿಸಿದ್ದು ಪಂದ್ಯದ ನಂತರ ಇತರರೊಂದಿಗೆ ಪ್ರಸ್ತುತಿ ಪ್ರದೇಶದಲ್ಲಿ ಹಾಜರಿದ್ದರು. ನಖ್ವಿ ಪಾಕಿಸ್ತಾನಿ ಆಟಗಾರರಿಗೆ ವಿಜೇತರ ಪದಕಗಳನ್ನು ಪ್ರದಾನ ಮಾಡಿ ನಾಯಕ ಫರ್ಹಾನ್ ಯೂಸುಫ್‌ಗೆ ಟ್ರೋಫಿಯನ್ನು ಹಸ್ತಾಂತರಿಸಿದರು. ಆದರೆ ಭಾರತೀಯ ಆಟಗಾರರು ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿಲ್ಲ. ಏಷ್ಯಾ ಕಪ್ ಆತಿಥ್ಯ ಮತ್ತು ನಿಯಂತ್ರಣದ ಬಗ್ಗೆ ವಿವಾದ ಮುಂದುವರೆದಿದೆ. ಏತನ್ಮಧ್ಯೆ, ನಖ್ವಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಮತ್ತು ಈಗ U19 ಏಷ್ಯಾ ಕಪ್ ಟ್ರೋಫಿಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದ್ದು, ಈ ವಿಷಯವನ್ನು ಮತ್ತೆ ಬೆಳಕಿಗೆ ಬಂದಿದೆ.
Advertisement