

14 ವರ್ಷದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಆದರೆ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಬುಧವಾರ ಅರುಣಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಬಿಹಾರ ತಂಡದ ಸಹ ಆಟಗಾರ ಶಕಿಬುಲ್ ಗನಿ ಹೊಸ ದಾಖಲೆ ಬರೆದಿದ್ದಾರೆ. ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಬಾರಿಸಿ, 84 ಎಸೆತಗಳಲ್ಲಿ 190 ರನ್ ಗಳಿಸಿದರೆ, ಗನಿ ಕೇವಲ 32 ಎಸೆತಗಳಲ್ಲಿಯೇ ಶತಕ ಗಳಿಸಿ ಮಿಂಚಿದ್ದಾರೆ. ಇದು ಭಾರತೀಯನೊಬ್ಬ ಗಳಿಸಿದ ಇದುವರೆಗಿನ ವೇಗದ ಲಿಸ್ಟ್ ಎ ಶತಕವಾಗಿದೆ.
2024ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಪಂಜಾಬ್ ಬ್ಯಾಟ್ಸ್‌ಮನ್ ಅನ್ಮೋಲ್‌ಪ್ರೀತ್ ಸಿಂಗ್ ಅವರು 35 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಇದೀಗ ಗನಿ ಮುರಿದಿದ್ದಾರೆ. ಅಂತಿಮವಾಗಿ ಗನಿ ಕೇವಲ 40 ಎಸೆತಗಳಲ್ಲಿ 12 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳ ನೆರವಿನಿಂದ ಅಜೇಯ 128 ರನ್ ಗಳಿಸಿದರು.
ಗನಿ, ವೈಭವ್ ಸೂರ್ಯವಂಶಿ ಮತ್ತು ವಿಕೆಟ್ ಕೀಪರ್ ಆಯುಷ್ ಲೋಹರುಕ (56 ಎಸೆತಗಳಲ್ಲಿ 116) ಅವರ ಸಂಯೋಜಿತ ಪ್ರಯತ್ನದಿಂದ ಬಿಹಾರ ತಂಡವು 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 574 ರನ್ ಕಲೆಹಾಕಿತು. ಇದು ವೃತ್ತಿಪರ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ.
ವೈಭವ್ ಸೂರ್ಯವಂಶಿ ಇದೀಗ ಅದೇ ಪಂದ್ಯದಲ್ಲಿ 36 ಎಸೆತಗಳಲ್ಲಿ ಗಳಿಸಿದ ಶತಕವು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ನಾಲ್ಕನೇ ವೇಗದ ಶತಕವಾಗಿದೆ.
ಸೂರ್ಯವಂಶಿ ಅವರು ಔಟಾದ ಸ್ವಲ್ಪ ಸಮಯದ ನಂತರ ಗನಿ ಬ್ಯಾಟಿಂಗ್‌ಗೆ ಬಂದರು. ಆಗ ಬಿಹಾರ 39.3 ಓವರ್‌ಗಳಲ್ಲಿ 391/3 ಸ್ಕೋರ್ ಮಾಡಿತ್ತು. ಗಣಿ ಅವರ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬಿಹಾರ ಇತಿಹಾಸವನ್ನು ಸೃಷ್ಟಿಸಿದ್ದಲ್ಲದೆ, ತಮಿಳುನಾಡಿನ ದಾಖಲೆಯನ್ನು ಅಳಿಸಿಹಾಕಿತು. ತಮಿಳುನಾಡಿನ ಅತ್ಯಧಿಕ ಏಕದಿನ ಸ್ಕೋರ್ (506) ದಾಖಲೆಯನ್ನು ಸರಿಗಟ್ಟಿತು.
26 ವರ್ಷದ ಗನಿ ಬಿಹಾರದ ಮೋತಿಹಾರಿ ನಗರದವರು. ಬ್ಯಾಟಿಂಗ್ ಆಲ್‌ರೌಂಡರ್ ಆಗಿರುವ ಅವರ ಅಂಕಿಅಂಶಗಳು ಅವರು ಅತ್ಯಂತ ವಿನಾಶಕಾರಿ ಹಿಟ್ಟರ್ ಅಲ್ಲ ಎಂದು ಸೂಚಿಸುತ್ತವೆ. ಪಂದ್ಯಕ್ಕೂ ಮೊದಲು ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕೇವಲ 71.95 ಸ್ಟ್ರೈಕ್-ರೇಟ್ ಹೊಂದಿದ್ದರು.
ಬುಧವಾರ, ಗನಿ ತಮ್ಮ ವಿನಾಶಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ಎದುರಿಸಿದ 40 ಎಸೆತಗಳಲ್ಲಿ ಕೇವಲ ಐದು ಎಸೆತಗಳು ಡಾಟ್ ಬಾಲ್‌ಗಳಾಗಿದ್ದವು. ಒಟ್ಟು 22 ಎಸೆತಗಳು ಬೌಂಡರಿ ಗೆರೆಗಳನ್ನು ದಾಟಿದವು.
ಈ ಮಧ್ಯೆ, ವೈಭವ್ ಸೂರ್ಯವಂಶಿ ಎರಡು ಐತಿಹಾಸಿಕ ಸಾಧನೆಗಳನ್ನು ಮಾಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಮತ್ತು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಅತ್ಯಂತ ವೇಗದ 150 ರನ್ ಗಳಿಸಿದ ದಾಖಲೆ ಬರೆದರು.
Advertisement