

ಜೈಪುರ: ವಿಜಯ್ ಹಜಾರೆ ಟ್ರೋಫಿಯ ಇಂದಿನ ಉತ್ತರಾಖಂಡ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅದ್ಧುತ ಕ್ಯಾಚ್ ವೊಂದನ್ನು ಪಡೆದರು.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ನೀಡಿರುವ 332 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಉತ್ತರಾಖಂಡ 35.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿದ್ದು, ಗೆಲ್ಲಲು ಇನ್ನೂ 130 ರನ್ ಗಳ ಅವಶ್ಯಕತೆ ಇದೆ.
ರೋಹಿತ್ ಶರ್ಮಾ ಅದ್ಭುತ ಕ್ಯಾಚ್
ಇನ್ನು ಈ ಪಂದ್ಯದಲ್ಲಿ ಭಾರತದ ಹಿಟ್ ಮ್ಯಾನ್ ಬ್ಯಾಟಿಂಗ್ ನಲ್ಲಿ ವಿಫಲರಾದರೂ ಫೀಲ್ಡಿಂಗ್ ನಲ್ಲಿ ಅದ್ಬುತ ಕ್ಯಾಚ್ ಹಿಡಿಯುವ ಮೂಲಕ ತಂಡಕ್ಕೆ ನೆರವಾದರು. ಮುಂಬೈ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ್ದ ಉತ್ತರಾಖಂಡ ಭರ್ಜರಿ ಆರಂಭ ಕಾಣುವ ಹುಮ್ಮಸ್ಸಿನಲ್ಲಿತ್ತು.
ಇದಕ್ಕೆ ಇಂಬು ನೀಡುವಂತೆ ಮೊದಲ ಓವರ್ ನಲ್ಲೇ ಆರಂಭಿಕ ಆಟಗಾರ ಯುವರಾಜ್ ಚೌದರಿ ಬೌಂಡರಿ ಬಾರಿಸಿದ್ದರು. ಆದರೆ ಈ ಹಂತದಲ್ಲಿ ಮತ್ತೋರ್ವ ಆರಂಭಿಕ ಆಟಗಾರ ಕಮಲ್ ಕೇವಲ 1 ರನ್ ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಔಟಾದರು.
ಶಾರ್ದೂಲ್ ಠಾಕೂರ್ ಎಸೆದ ಎಸೆತವನ್ನು ಫ್ಲಿಕ್ ಮಾಡಿ ಬೌಂಡರಿ ಪಡೆಯಲು ಕಮಲ್ ಯತ್ನಿಸಿದರು. ಆದರೆ ಮೊದಲ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾ ಅದ್ಭುತವಾಗಿ ಅದನ್ನು ಕ್ಯಾಚ್ ಪಡೆದರು.
ರೋಹಿತ್ ಭಾಯ್ ಗೆ ಹೊಡಿರೋ ಚಪ್ಪಾಳೆ
ಇನ್ನು ಅತ್ತ ರೋಹಿತ್ ಕ್ಯಾಚ್ ಹಿಡಿಯುತ್ತಲೇ ಮುಂಬೈ ತಂಡದ ಆಟಗಾರರು ಓಡಿ ಬಂದು ರೋಹಿತ್ ಶರ್ಮಾರನ್ನು ಅಭಿನಂದಿಸಿದರು. ಈ ವೇಳೆ ಮೈದಾನದಲ್ಲಿದ್ದ ಮತ್ತೋರ್ವ ಆಟಗಾರ ಮುಷೀರ್ ಖಾನ್ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಎಂತಹ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಚಪ್ಪಾಳೆ ಹೊಡೆದು ಹುರಿದುಂಬಿಸಿ ಎಂದು ಹೇಳಿದರು. ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಅಂದಹಾಗೆ ಮುಷೀರ್ ಖಾನ್ ಭಾರತ ತಂಡದ ಉದಯೋನ್ಮುಖ ಆಟಗಾರ ಸರ್ಫರಾಜ್ ಖಾನ್ ರ ಸಹೋದರನಾಗಿದ್ದು, ಇಬ್ಬರೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಅಭಿಮಾನಿಗಳು ಎಂದು ಹೇಳಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಪರ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆಗಿದ್ದರು.
Advertisement