

ತಿರುವುನಂತಪುರಂ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 4ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಭಾರತ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಹೌದು.. ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಇಂದು ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು 221 ರನ್ ಗಳಿಸಿ ಶ್ರೀಲಂಕಾಗೆ ಗೆಲ್ಲಲು 222 ರನ್ ಗಳ ಬೃಹತ್ ಗುರಿ ನೀಡಿದೆ.
ಇಂದು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಆರಂಭದಿಂದಲೇ ಶ್ರೀಲಂಕಾ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿತು. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಭಾರತಕ್ಕೆ ಸ್ಫೋಟಕ ಆರಂಭ ನೀಡಿದರು.
ಮೊದಲ ವಿಕೆಟ್ ಗೆ ಈ ಜೋಡಿ ದಾಖಲೆಯ 162 ರನ್ ಜೊತೆಯಾಟ ನೀಡಿತು. ಸ್ಮೃತಿ ಮಂಧಾನ 48 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ 80 ರನ್ ಚಚ್ಚಿದರೆ, ಮತ್ತೊಂದು ತುದಿಯಲ್ಲಿ ಅವರಿಗೆ ಸ್ಪರ್ಧೆ ನೀಡುತ್ತಿದ್ದ ಶಫಾಲಿ ವರ್ಮಾ ಕೂಡ 46 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ 79 ರನ್ ಕಲೆಹಾಕಿದರು.
ಈ ಜೋಡಿ ತಲಾ ಶತಕ ಸಿಡಿಸುತ್ತದೆ ಎನ್ನವಾಗಲೇ 79 ರನ್ ಗಳಿಸಿದ್ದ ಶಫಾಲಿ ವರ್ಮಾ ಮಧುಶನಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಸ್ಮೃತಿ ಕೂಡ ಶೆಹಾನಿ ಬೌಲಿಂಗ್ ನಲ್ಲಿ 80 ರನ್ ಗಳಿಸಿದ್ದಾಗ ಔಟಾದರು.
ಆರಂಭಿಕರಿಬ್ಬರೂ ಔಟಾದರ ಬಳಿಕ ಜೊತೆಗೂಡಿದ ರಿಚಾ ಘೋಷ್ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಕೂಡ ಉತ್ತಮ ಬ್ಯಾಟಿಂಗ್ ಮುಂದುವರೆಸಿದರು. ರಿಚಾ ಘೋಷ್ 16 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ ಅಜೇಯ 40 ರನ್ ಗಳಿಸಿದರೆ, ಹರ್ಮನ್ 1 ಸಿಕ್ಸರ್ ಮತ್ತು 1 ಬೌಂಡರಿ ಸಹಿತ ಅಜೇಯ 16 ರನ್ ಗಳಿಸಿ ತಂಡದ ಮೊತ್ತ 200 ಗಡಿ ದಾಟುವಂತೆ ನೋಡಿಕೊಂಡರು.
ಅಂತಿಮವಾಗಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಶ್ರೀಲಂಕಾಗೆ ಗೆಲ್ಲಲು 222 ರನ್ ಗಳ ಗುರಿ ನೀಡಿದೆ.
ದಾಖಲೆ
ಇನ್ನು ಹರ್ಮನ್ ಪಡೆ ಇಂದು ಗಳಿಸಿದ 221 ರನ್ ಗಳು ಮಹಿಳಾ ಟಿ20 ಇತಿಹಾಸದಲ್ಲಿ ಭಾರತ ತಂಡದ ಗರಿಷ್ಠ ರನ್ ಗಳಿಕೆಯಾಗಿದೆ. ಈ ಹಿಂದೆ 2024ರಲ್ಲಿ ಮುಂಬೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್ ಕಲೆಹಾಕಿತ್ತು. ಇದು ಭಾರತ ತಂಡದ ಈ ವರೆಗಿನ ಗರಿಷ್ಟ ಸ್ಕೋರ್ ಆಗಿತ್ತು.
Advertisement