
ಕೌಲಲಾಂಪುರ: ಭಾನುವಾರ ಇಲ್ಲಿ ನಡೆದ ಐಸಿಸಿ 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 82 ರನ್ ಗಳಿಸಿ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾ ನೀಡಿದ 83 ರನ್‌ಗಳ ಅಲ್ಪ ಗುರಿಯನ್ನು ಬೆನ್ನಟ್ಟಿದ ಭಾರತ 11.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಭಾರತದ ಪರ ಗೊಂಗಡಿ ತ್ರಿಶಾ ಮೂರು ವಿಕೆಟ್ ಕಬಳಿಸಿದರೆ, ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಮತ್ತು ಪಾರುಣಿಕ ಸಿಸೋಡಿಯಾ ಅವರು ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ ತ್ರಿಶಾ 33 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿದರೆ, ಸಾನಿಕಾ ಚಲ್ಕೆ 22 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗದೆ ಉಳಿದರು.
ದಕ್ಷಿಣ ಆಫ್ರಿಕಾ ಪರ ಮೈಕೆ ವ್ಯಾನ್ ವೂರ್ಸ್ಟ್ ಮಾತ್ರ (23) ಗರಿಷ್ಠ ಸ್ಕೋರ್ ಮಾಡಿದರು. ಉಳಿದ ನಾಲ್ವರು ಬ್ಯಾಟರ್‌ಗಳು ಮಾತ್ರ ಎರಡಂಕಿಯ ರನ್ ಕಲೆಹಾಕಿದರೆ, ಮತ್ತೆ ನಾಲ್ವರು ತಮ್ಮ ಖಾತೆಗಳನ್ನು ಸಹ ತೆರೆಯಲು ಸಾಧ್ಯವಾಗಲಿಲ್ಲ.
2023ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಭಾರತವು ಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದಿತ್ತು. ಭಾರತ ತಂಡವನ್ನು ಕರ್ನಾಟಕದ ನಿಕಿ ಪ್ರಸಾದ್ ಮುನ್ನಡೆಸಿದ್ದು, ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Advertisement