
ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಹರ್ಷಿತ್ ರಾಣಾ ಈ ಪಂದ್ಯದಲ್ಲಿ 3 ವಿಕೆಟ್ ಪಡೆದು ತಮ್ಮ ಮೊದಲ ಪಂದ್ಯವನ್ನೇ ಸ್ಮರಣೀಯವಾಗಿಸಿಕೊಂಡರು. ಆದರೆ ತಮ್ಮ ಈ ಯಶಸ್ಸಿಗೆ ನಾಯಕ ರೋಹಿತ್ ಶರ್ಮಾ ಹೇಳಿದ ಗುಟ್ಟು ಕಾರಣ ಎಂದು ಹರ್ಷಿತ್ ಹೇಳಿದ್ದಾರೆ.
ಹೌದು.. ನಾಗ್ಪುರದ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯವಾದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಪರ ಹರ್ಷಿತ್ ರಾಣಾ 3 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಆದರೆ ಇದೇ ಹರ್ಷಿತ್ ರಾಣ ಇದೇ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಬರೊಬ್ಬರಿ 26 ರನ್ ನೀಡಿ ಆ ಕ್ಷಣದ ವಿಲನ್ ಆಗಿದ್ದರು.
ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಕೇವಲ 11 ರನ್‌ಗಳನ್ನು ನೀಡಿ ಉತ್ತಮ ಆರಂಭ ಪಡೆದಿದ್ದ ಹರ್ಷಿತ್ ರಾಣಾ ಒಂದು ಮೇಡನ್ ಕೂಡ ಪಡೆದಿದ್ದರು. ಆದರೆ ಅವರ ಮೂರನೇ ಓವರ್ ನಲ್ಲಿ 26 ರನ್ ಹೊಡೆಸಿಕೊಂಡು ಭಾರತ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾದರು. ಇದು ODIಗಳಲ್ಲಿ ಭಾರತಕ್ಕೆ ನಾಲ್ಕನೇ ಅತ್ಯಂತ ದುಬಾರಿ ಮತ್ತು ಚೊಚ್ಚಲ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ದುಬಾರಿ ರನ್ ಹೊಡೆಸಿಕೊಂಡ ನಾಲ್ಕನೇ ಆಟಗಾರ ಎನಿಸಿಕೊಂಡರು.
ಮೊದಲು ವಿಲನ್... ಬಳಿಕ ಹೀರೋ
ಇನ್ನು ಈ ದುಬಾರಿ 3ನೇ ಓವರ್ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹರ್ಷಿತ್ ರಾಣಾಗೆ ಒಂದಷ್ಟು ಟಿಪ್ಸ್ ನೀಡಿದ್ದರು. ಈ ಟಿಪ್ಸ್ ಅನ್ನು ಚಾಚೂ ತಪ್ಪದೇ ಫಾಲೋ ಮಾಡಿದ ಹರ್ಷಿತ್ ರಾಣಾ ಬೆನ್ ಡಕೆಟ್, ಹ್ಯಾರಿ ಬ್ರೂಕ್ ಮತ್ತು ಲಿವಿಂಗ್ ಸ್ಟೋನ್ ರ ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಮದ್ಯಮ ಕ್ರಮಾಂಕವನ್ನೇ ಮುರಿದರು. ಆ ಮೂಲಕ ತಮ್ಮ ದುಬಾರಿ ಮೂರನೇ ಓವರ್ ನ ಸೇಡು ತೀರಿಸಿಕೊಂಡರು.
ಇಷ್ಟಕ್ಕೂ ರೋಹಿತ್ ಹೇಳಿದ್ದೇನು?
ಪಂದ್ಯ ಮುಕ್ತಾಯದ ಬಳಿಕ ತಮ್ಮ ಯಶಸ್ಸಿನ ಗುಟ್ಟು ಹೇಳಿದ ಹರ್ಷಿತ್ ರಾಣಾ, ತಾವು ರೋಹಿತ್ ಶರ್ಮಾ ನೀಡಿದ ಸಲಹೆಗಳನ್ನು ನನ್ನ ಬೌಲಿಂಗ್ ನಲ್ಲಿ ಅಳವಡಿಸಿಕೊಂಡೆ ಎಂದು ಹೇಳಿದ್ದಾರೆ. 'ಅವರು (ಇಂಗ್ಲೆಂಡ್ ತಂಡ) ಜಾಗ ಹುಡುಕುತ್ತಿದ್ದರು. ಸ್ವಲ್ಪ ಜಾಗ ಸಿಕ್ಕಾಗ ಮಾತ್ರ ಅವರ ತೋಳುಗಳನ್ನು ಮುಕ್ತಗೊಳಿಸಿ ದಾಳಿ ಮಾಡಲು ಅವಕಾಶ ಸಿಕ್ಕಿತು. ಹಾಗಾಗಿ, ರೋಹಿತ್ ಭಯ್ಯಾ ಸಾಧ್ಯವಾದಷ್ಟು ಬಿಗಿಯಾಗಿ ಬೌಲಿಂಗ್ ಮಾಡಬೇಕೆಂದು ನನಗೆ ಸಲಹೆ ನೀಡಿದರು. ಅದನ್ನೇ ನಾನು ಮಾಡಲು ಪ್ರಯತ್ನಿಸಿದೆ. ರೋಹಿತ್ ಶರ್ಮಾ ಅವರ ಸಲಹೆ ನಿಜಕ್ಕೂ ನನಗೆ ನೆರವಾಯಿತು ಎಂದು ಹೇಳಿದ್ದಾರೆ.
ಪವರ್‌ಪ್ಲೇ ಸಮಯದಲ್ಲಿ ರೋಹಿತ್ ಶರ್ಮಾ ರಾಣಾಗೆ ಮತ್ತೊಂದು ಓವರ್ ನೀಡಿದರು ಮತ್ತು ನಾಲ್ಕು ಎಸೆತಗಳ ಅಂತರದಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು. ಯಶಸ್ವಿ ಜೈಸ್ವಾಲ್ ಹಿಡಿದ ಅದ್ಭುತ ಕ್ಯಾಚ್ ಮೂಲಕ ರಾಣಾ ಬೆನ್ ಡಕೆಟ್ ಅವರ ವಿಕೆಟ್ ಪಡೆದರು. ಬಳಿಕ ಕೇವಲ ಮೂರು ಎಸೆತಗಳ ನಂತರ, ರಾಣಾ ಅವರ ತೀಕ್ಷ್ಣವಾದ ಶಾರ್ಟ್ ಬಾಲ್ ಹ್ಯಾರಿ ಬ್ರೂಕ್ ಅವರನ್ನು ಕೆ.ಎಲ್. ರಾಹುಲ್‌ಗೆ ಸ್ಟಂಪ್‌ಗಳ ಹಿಂದೆ ಕೈಚೆಲ್ಲುವಂತೆ ಮಾಡಿತು.
ಅಂತೆಯೇ "ಇದು ನನ್ನ ಕನಸಿನ ಜೀವನ, ಆದರೆ ನಾನು ಇದಕ್ಕಾಗಿ ನಿಜವಾಗಿಯೂ ಶ್ರಮಿಸಿದ್ದೇನೆ, ಆದ್ದರಿಂದ ನಾನು ಅಂತಿಮವಾಗಿ ಆ ಪ್ರಯತ್ನದ ಪ್ರತಿಫಲವನ್ನು ಪಡೆಯುತ್ತಿದ್ದೇನೆ ಎಂದು ಅನಿಸುತ್ತದೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದ ನಂತರ, ಹರ್ಷಿತ್ ರಾಣಾ ಭಾರತ ತಂಡದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಕ್ರಿಕೆಟ್ ಆಟದ ಮೂರು ಸ್ವರೂಪಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ್ದಾರೆ.
Advertisement