
ಲಾಹೋರ್: ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಒಂದಲ್ಲಾ ಒಂದು ಅಡೆತಡೆ ಬರುತ್ತಿದ್ದು, ಇದೀಗ ಈ ಪಟ್ಟಿಗೆ ಮತ್ತೊಂದು ಹೊಸ ತಲೆನೋವು ಸೇರ್ಪಡೆಯಾಗಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ ಏರ್ಪಟ್ಟಿದೆ.
ಹೌದು.. ಇದೇ ಫೆಬ್ರವರಿ 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಐಸಿಸಿ, ಅಂಪೈರ್‌ಗಳ ಹಾಗೂ ಮ್ಯಾಚ್ ರೆಫರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 12 ಅಂಪೈರ್ಗಳು ಹಾಗೂ ಮೂವರು ಮ್ಯಾಚ್ ರೆಫರಿಗಳು ಸೇರಿದ್ದಾರೆ. ಅಚ್ಚರಿಯಿಂದರೆ ಈ ಎರಡೂ ಪಟ್ಟಿಗಳಲ್ಲಿ ಭಾರತದ ಇಬ್ಬರು ಖ್ಯಾತ ಪಂದ್ಯದ ಅಧಿಕಾರಿಗಳ ಹೆಸರು ನಾಪತ್ತೆಯಾಗಿದೆ. ಭಾರತದ ಅಂಪೈರ್ ನಿತಿನ್ ಮೆನನ್ ಮತ್ತು ರೆಫರಿ ಜಾವಗಲ್ ಶ್ರೀನಾಥ್ ರನ್ನು ಕೈಬಿಟ್ಟು ಐಸಿಸಿ ಈ ಪಟ್ಟಿ ಸಿದ್ಧಪಡಿಸಿದೆ.
ಐಸಿಸಿ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದಿರುವ ನಿತಿನ್ ಮೆನನ್ ಹಾಗೂ ಅನುಭವಿ ಮ್ಯಾಚ್ ರೆಫರಿ ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಈ ಪಟ್ಟಿಯಲ್ಲಿಲ್ಲ. ವಾಸ್ತವವಾಗಿ ಈ ಇಬ್ಬರು ಐಸಿಸಿ ಆಯೋಜನೆ ಮಾಡುವ ಪ್ರತಿಯೊಂದು ಪಂದ್ಯಾವಳಿಯಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಆದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರು ಇರುವುದಿಲ್ಲ.
ಕಾರಣವೇನು?
ವರದಿಯ ಪ್ರಕಾರ, ಈ ಇಬ್ಬರು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದು, ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೆ ಈ ಇಬ್ಬರನ್ನು ಹೊರತು ಪಡಿಸಿ ಐಸಿಸಿ ಹೊಸ ಪಟ್ಟಿ ತಯಾರಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಇಬ್ಬರೂ ಭಾರತ ಮೂಲದವರಾಗಿದ್ದು, ಅದರಲ್ಲೂ ಜಾವಗಲ್ ಶ್ರೀನಾಥ್ ಕರ್ನಾಟಕದವರಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಘರ್ಷ ಮತ್ತು ಪಾಕಿಸ್ತಾನದಲ್ಲಿನ ಭದ್ರತಾ ಭೀತಿಯೇ ಅವರನ್ನು ಪಾಕಿಸ್ತಾನಕ್ಕೆ ಹೋಗಲು ಹಿಂದೇಟು ಹಾಕುವಂತೆ ಮಾಡಿದೆ ಎನ್ನಲಾಗಿದೆ.
ಚಾಂಪಿಯನ್ಸ್ ಟ್ರೋಫಿಗೆ ಅಂಪೈರ್‌ಗಳ ಪಟ್ಟಿ
ಕುಮಾರ್ ಧರ್ಮಸೇನ, ಕ್ರಿಸ್ ಗ್ಯಾಫ್ನಿ, ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋ, ಎಹ್ಸಾನ್ ರಜಾ, ಪಾಲ್ ರೈಫಲ್, ಶರಫುದ್ದೌಲಾ ಇಬ್ನೆ ಶಾಹಿದ್, ರಾಡ್ನಿ ಟಕರ್, ಅಲೆಕ್ಸ್ ವಾರ್ಫ್, ಜೋಯಲ್ ವಿಲ್ಸನ್.
ಮ್ಯಾಚ್ ರೆಫರಿಗಳ ಪಟ್ಟಿ
ಡೇವಿಡ್ ಬೂನ್, ಆಂಡ್ರ್ಯೂ ಪೈಕ್ರಾಫ್ಟ್ ಮತ್ತು ರಂಜನ್ ಮದುಗಲ್ಲೆ ಪಂದ್ಯದ ರೆಫರಿಗಳಾಗಿರುತ್ತಾರೆ.
Advertisement