
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್ ಕೊಹ್ಲಿ ಎಂದು ಕರೆಯುತ್ತಾರೆ. ಅದೇ ರೀತಿ ಪಾಕಿಸ್ತಾನದಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನು ಬರೆದಿರುವ ಪಾಕ್ ಬ್ಯಾಟರ್ ಬಾಬರ್ ಅಜಂನನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿ ಅಭಿಮಾನಿಗಳು 'ಕಿಂಗ್' ಎಂದು ಕರೆಯುತ್ತಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಗೆದ್ದ ನಂತರ ಸುದ್ದಿಗೋಷ್ಠಿ ನಡೆಸಿದ್ದ ಬಾಬರ್ ಅಜಂ ಅಭಿಮಾನಿಗಳು ಮತ್ತು ಮಾಧ್ಯಮಗಳು ತಮ್ಮನ್ನು ಕಿಂಗ್ ಎಂದು ಕರೆಯುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ತಮ್ಮ ವೈಯಕ್ತಿಕ ಸಾಧನೆಗಿಂತ ತಂಡದ ಯಶಸ್ಸಿನತ್ತ ಹೆಚ್ಚು ಗಮನಹರಿಸುತ್ತಿರುವುದಾಗಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪಂದ್ಯದ ನಂತರ ಪತ್ರಕರ್ತರೊಂದಿಗೆ ಮುಕ್ತವಾಗಿ ಮಾತನಾಡಿದ ಬಾಬರ್, ದಯವಿಟ್ಟು ನನ್ನನ್ನು ಕಿಂಗ್ ಎಂದು ಕರೆಯುವುದನ್ನು ನಿಲ್ಲಿಸಿ. ನಾನು ಕಿಂಗ್ ಅಲ್ಲ, ನಾನು ಇನ್ನೂ ಆ ಮಟ್ಟಕ್ಕೆ ತಲುಪಿಲ್ಲ. ಈಗ ನಾನು ತಂಡದಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಂದ್ಯವನ್ನು ಗೆದ್ದಿದ್ದಕ್ಕಾಗಿ ಬಾಬರ್ ತಮ್ಮ ತಂಡದ ಆಟಗಾರರನ್ನು ಶ್ಲಾಘಿಸಿದರು. ನಾಲ್ಕನೇ ವಿಕೆಟ್‌ಗೆ 261 ರನ್‌ಗಳ ದಾಖಲೆಯ ಪಾಲುದಾರಿಕೆಯೊಂದಿಗೆ ಪಾಕಿಸ್ತಾನವನ್ನು ದಾಖಲೆಯ ಗುರಿ ತಲುಪಿಸಿದ ಮೊಹಮ್ಮದ್ ರಿಜ್ವಾನ್ ಮತ್ತು ಅಘಾ ಸಲ್ಮಾನ್ ಅವರನ್ನು ಅವರು ಶ್ಲಾಘಿಸಿದರು.
ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಬಾಬರ್, ವೈಯಕ್ತಿಕ ಸವಾಲುಗಳಿಂದ ಹೊರಬರುವುದು ಮತ್ತು ತಂಡದ ಪ್ರದರ್ಶನದ ಮೇಲೆ ಕೇಂದ್ರೀಕರಿಸುವ ಮಹತ್ವವನ್ನು ಒತ್ತಿ ಹೇಳಿದರು. ನಾನು ಮೊದಲು ಮಾಡಿದ್ದೆಲ್ಲವೂ ಹಿಂದಿನದು ಎಂದು ಅವರು ಹೇಳಿದರು. ಪ್ರತಿಯೊಂದು ಪಂದ್ಯವೂ ಹೊಸ ಸವಾಲು ಮತ್ತು ನಾನು ವರ್ತಮಾನ ಮತ್ತು ಭವಿಷ್ಯದತ್ತ ಗಮನ ಹರಿಸಬೇಕು ಎಂದರು. 2023ರ ಆಗಸ್ಟ್ 30ರಂದು ಬಾಬರ್ ಅಜಂ ಕೊನೆಯ ಶತಕ ಗಳಿಸಿದ್ದರು. ಮುಲ್ತಾನ್ ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಅಜಂ ನೇಪಾಳ ವಿರುದ್ಧ 131 ಎಸೆತಗಳಲ್ಲಿ 151 ರನ್ ಗಳಿಸಿದರು. ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ 31ನೇ ಶತಕವಾಗಿತ್ತು. ಅಂದಿನಿಂದ ಫಾರ್ಮ್ ಗೆ ಮರಳಲು ಅಜಂ ಯತ್ನಿಸುತ್ತಿದ್ದಾರೆ.
Advertisement