
ದುಬೈ: ಫೆಬ್ರುವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನದ ಮೊತ್ತವನ್ನು ಶೇ 53ರಷ್ಟು ಹೆಚ್ಚಿಸಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ವಿಜೇತ ತಂಡವು 2.24 ಮಿಲಿಯನ್ ಡಾಲರ್ ನಗದು ಬಹುಮಾನ ಪಡೆಯಲಿದೆ.
ವಿಜೇತರು ಭಾರತೀಯ ಕರೆನ್ಸಿಯಲ್ಲಿ ಸುಮಾರು 19.45 ಕೋಟಿ ರೂಪಾಯಿ ನಗದನ್ನು ಪಡೆಯಲಿದ್ದಾರೆ.
ರನ್ನರ್ ಅಪ್ ಆದ ತಂಡವು ಅರ್ಧದಷ್ಟು ಮೊತ್ತವನ್ನು ಅಂದರೆ 9.72 ಕೋಟಿ ರೂಪಾಯಿಯನ್ನು ಪಡೆಯಲಿದೆ ಮತ್ತು ಸೆಮಿಫೈನಲ್ ಪಂದ್ಯದಲ್ಲಿ ಸೋತ ತಂಡವು 4.86 ಕೋಟಿ ರೂ.ಗಳನ್ನು ಪಡೆಯಲಿದೆ.
ಸದ್ಯ ಒಟ್ಟು ಬಹುಮಾನದ ಮೊತ್ತವನ್ನು 59,94 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೆ 1.08 ಕೋಟಿ ರೂಪಾಯಿ ಸಿಗಲಿದೆ.
'ಬಹುಮಾನದ ಮೊತ್ತವನ್ನು ಏರಿಕೆ ಮಾಡಿರುವುದು ಕ್ರಿಕೆಟ್ ಅನ್ನು ಉತ್ತೇಜಿಸಲು ಮತ್ತು ಜಾಗತಿಕವಾಗಿ ಕ್ರೀಡೆಯನ್ನು ಉನ್ನತೀಕರಿಸಲು ಮತ್ತು ನಮ್ಮ ಕಾರ್ಯಕ್ರಮಗಳ ಉನ್ನತ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಐಸಿಸಿಯ ನಿರಂತರ ಪ್ರಯತ್ನವನ್ನು ತೋರಿಸುತ್ತದೆ' ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಗುಂಪು ಹಂತದ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 30 ಲಕ್ಷ ರೂ. ನೀಡಲಾಗುತ್ತದೆ. ಐದು ಅಥವಾ ಆರನೇ ಸ್ಥಾನದಲ್ಲಿರುವ ತಂಡಗಳು ತಲಾ 3 ಕೋಟಿ ರೂ. ಪಡೆಯುತ್ತವೆ. ಆದರೆ, ಏಳು ಮತ್ತು ಎಂಟನೇ ಸ್ಥಾನದಲ್ಲಿರುವ ತಂಡಗಳು 1.2 ಕೋಟಿ ರೂಪಾಯಿಯನ್ನು ಗಳಿಸುತ್ತವೆ. ಇದಲ್ಲದೆ, ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಎಂಟು ತಂಡಗಳು 1.08 ಕೋಟಿ ರೂ. ಪಡೆಯುತ್ತವೆ.
ಈ ಪಂದ್ಯಾವಳಿಯು 1996 ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ICC ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆದರೆ, ಭದ್ರತೆಯ ಕಾರಣದಿಂದ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಫೆಬ್ರುವರಿ 20 ರಂದು ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಯೋಜಿಸಲಾಗಿದೆ. 2025ರ ಆವೃತ್ತಿಯಲ್ಲಿ ಎಂಟು ತಂಡಗಳು ಆಡಲಿದ್ದು, ನಾಲ್ಕು ತಂಡಗಳ ಎರಡು ಗುಂಪುಗಳ್ನಾಗಿ ಮಾಡಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ ಎರಡು ಸೆಮಿಫೈನಲ್‌ಗೆ ಪ್ರವೇಶ ಪಡೆಯುತ್ತವೆ.
Advertisement