
ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲನೇ ಪಂದ್ಯದಲ್ಲೇ ಸೋತಿರುವ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದ್ದು, ಇದೀಗ ಸೋಲಿನ ಕುರಿತು ತಂಡದಲ್ಲಿ ಪರಸ್ಪರ ಕೆಸರೆರಚಾಟ ಆರಂಭವಾಗಿದೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಗರ್ವದಲ್ಲಿದ್ದ ಪಾಕಿಸ್ತಾನಕ್ಕೆ ಮೊದಲ ಪಂದ್ಯದಲ್ಲೇ ಗರ್ವಭಂಗವಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ನ್ಯೂಜಿಲೆಂಡ್ ನೀಡಿದ್ದ 321 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ 47.2 ಓವರ್ ನಲ್ಲಿ 260 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 60ರನ್ ಗಳ ಅಂತರದಲ್ಲಿ ಹೀನಾಯ ಸೋಲು ದಾಖಲಿಸಿತು.
ಇನ್ನು ಪಂದ್ಯದ ಬಳಿಕ ತಂಡದ ಸೋಲಿನ ಕುರಿತು ಮಾತನಾಡಿದ ಪಾಕಿಸ್ತಾನ ನಾಯಕ ಮಹಮದ್ ರಿಜ್ವಾನ್, ತಂಡದ ಸೋಲಿಗೆ ಬೌಲರ್ ಗಳೇ ಕಾರಣ ಎಂದು ಹೇಳಿದರು. 'ನ್ಯೂಜಿಲೆಂಡ್ ತಂಡವು 320 ರನ್ ಗಳಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಉತ್ತಮ ಆರಂಭ ಮತ್ತು ಡೆತ್ ಓವರ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಮೊದಲ ಪಂದ್ಯದಲ್ಲಿ 60 ರನ್‌ಗಳ ಸೋಲಿಗೆ ಕಾರಣವಾಯಿತು. ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ, ನ್ಯೂಜಿಲೆಂಡ್ ಸ್ಥಿತಿಸ್ಥಾಪಕತ್ವ ಮತ್ತು ಯುದ್ಧತಂತ್ರದ ಚಾಣಾಕ್ಷತನವನ್ನು ಪ್ರದರ್ಶಿಸಿತು ಎಂದರು.
ಸೋಲಿಗೆ ಅವರೇ ಕಾರಣ
ನ್ಯೂಜಿಲೆಂಡ್ ಉತ್ತಮ ಮೊತ್ತ ಕಲೆಹಾಕಿತು. ಅವರು 320 ರನ್ ಗಳಿಸುತ್ತಾರೆಂದು ನಾವು ನಿರೀಕ್ಷಿಸಿರಲಿಲ್ಲ. ನಾವು ಆರಂಭಿಕ ವಿಕೆಟ್‌ಗಳನ್ನು ಪಡೆದಾಗ ಸುಮಾರು 260 ರನ್ ಗಳಿಸಬಹುದು ಎಂದು ಭಾವಿಸಿದ್ದೆವು. ವಿಲ್ ಯಂಗ್-ಲಾಥಮ್ ಜೊತೆಯಾಟ ನಿರ್ಣಾಯಕವಾಗಿತ್ತು. ನಾವು ಪ್ರಯತ್ನಿಸಿದೆವು, ಆದರೆ ಅವರು ತುಂಬಾ ಚುರುಕಾಗಿ ಆಡಿದರು ಮತ್ತು ಅದಕ್ಕಾಗಿಯೇ ಅವರು ಆ ಮೊತ್ತವನ್ನು ತಲುಪಿದರು. ಪಿಚ್ ಆರಂಭದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ, ಆದರೆ ವಿಲ್ ಯಂಗ್ ಮತ್ತು ಲಾಥಮ್ ಅವರ ಇನ್ನಿಂಗ್ಸ್ ನಿರ್ಣಾಯಕವಾಗಿತ್ತು. ಕೊನೆಯ ಓವರ್‌ಗಳಲ್ಲಿ ನಮ್ಮ ಎಕ್ಸಿಕ್ಯೂಶನ್ ಉತ್ತಮವಾಗಿರಲಿಲ್ಲ. ಇದು ಹೆಚ್ಚುವರಿ ರನ್ ಗಳಿಸಲು ನ್ಯೂಜಿಲೆಂಡ್ ನೆರವಾಯಿತು ಎಂದು ರಿಜ್ವಾನ್ ಹೇಳಿದರು.
ಭಾರತದ ವಿರುದ್ಧ ಒತ್ತಡದಲ್ಲಿ ಆಡುವುದಿಲ್ಲ
ಇದೇ ವೇಳೆ ಮುಂಬರುವ ಹೈ ವೊಲ್ಟೇಜ್ ಪಂದ್ಯದ ಕುರಿತು ಮಾತನಾಡಿದ ರಿಜ್ವಾನ್, 'ಭಾರತ ವಿರುದ್ಧದ ನಿರ್ಣಾಯಕ ಪಂದ್ಯಕ್ಕಾಗಿ ತಮ್ಮ ತಂಡವು ಯಾವುದೇ ಹೆಚ್ಚುವರಿ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅದನ್ನು ಸಾಮಾನ್ಯ ಪಂದ್ಯವೆಂದು ಪರಿಗಣಿಸುತ್ತದೆ ಎಂದು ಹೇಳಿದರು.
1996 ರ ನಂತರ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಪ್ರಮುಖ ಐಸಿಸಿ ಟೂರ್ನಮೆಂಟ್ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ಪಡೆದ ಪಾಕಿಸ್ತಾನ ಪ್ರೇಕ್ಷಕರಿಗೆ ಮೊದಲ ಪಂದ್ಯದಲ್ಲೇ ಕಹಿ ಅನುಭವವಾಗಿದೆ.
Advertisement