
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇಂದಿನಿಂದ ಭಾರತ ತಂಡದ ಅಭಿಯಾನ ಆರಂಭವಾಗುತ್ತಿದ್ದು, ಬಾಂಗ್ಲಾದೇಶದೊಂದಿಗೆ ಮುಖಾಮುಖಿಯಾಗುತ್ತಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೌದು.. 2025ರ ಚಾಂಪಿಯನ್ಸ್ ಟ್ರೋಫಿ ಆವೃತ್ತಿಯು ಅಬ್ಬರದಿಂದ ಆರಂಭವಾಗಿದ್ದು, ನ್ಯೂಜಿಲೆಂಡ್ ತಂಡ ಆತಿಥೇಯ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸಿತು. ಟೂರ್ನಿಯ 2ನೇ ಪಂದ್ಯ ಇಂದು ದುಬೈನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಪಂದ್ಯವು ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪಂದ್ಯ ಕಣ್ತುಂಬಿಕೊಳ್ಳಲು ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ದುಬೈಗೆ ಆಗಮಿಸಿದ್ದು, ಅವರಿಗೆ ಕೊಂಚ ನಿರಾಶೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ದುಬೈನ ಹವಾಮಾನ ವರದಿ ಹೇಗಿದೆ?
ದುಬೈನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದ ವೇಳೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎನ್ನಲಾಗಿದೆ. ಈ ಕುರಿತು Weather.com ವರದಿ ಮಾಡಿದ್ದು, ದುಬೈ ಹೆಚ್ಚಾಗಿ ಮೋಡ ಕವಿದ ವಾತಾವರಣವನ್ನು ಹೊಂದಿರುತ್ತದೆ. ಹೀಗಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಆಟಕ್ಕೆ ಮಳೆಯಿಂದ ಅಡ್ಡಿಯಾಗಬಹುದು.
ಪಂದ್ಯವು ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಪ್ರಾರಂಭವಾಗುತ್ತದೆ. ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ, ತಾಪಮಾನವು ಸುಮಾರು 26 ° C ಆಗಿರುತ್ತದೆ. ಈ ವೇಳೆ ಇಲ್ಲಿ ಕನಿಷ್ಠ ಶೇ.4%ರಷ್ಟು ಮಳೆಯಾಗುವ ಸಾಧ್ಯತೆ ಇರುತ್ತದೆ. ಇದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಶೇ.20%ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂತೆಯೇ ಸಂಜೆ 4 ಗಂಟೆಯವರೆಗೆ ತಾಪಮಾನವು 29°C ನಲ್ಲಿ ಸ್ಥಿರವಾಗಿರುತ್ತದೆ ಮತ್ತು ಸಂಜೆ 6 ಗಂಟೆಯ ಹೊತ್ತಿಗೆ ಕ್ರಮೇಣ ತಾಪಮಾನ 27°C ಗೆ ಇಳಿಯುತ್ತದೆ ಎಂದು ಮಾಹಿತಿ ನೀಡಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ
ಇನ್ನು ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದು, ಬಾಂಗ್ಲಾದೇಶವು ಮೂವರು ಸೀಮರ್‌ಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದೆ. ವೇಗಿ ನಹಿದ್ ರಾಣಾ ಬದಲಿಗೆ ತಂಜಿಮ್ ಹಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.
ಇನ್ನು ಫಿಟ್ ಆದ ಬಳಿಕ ಚಾಂಪಿಯನ್ಸ್ ಟ್ರೋಫಿ ಆಡಲು ಮೊಹಮ್ಮದ್ ಶಮಿ ವಾಪಸಾಗಿದ್ದಾರೆ. ವರುಣ್ ಚಕ್ರವರ್ತಿ ಅಥವಾ ಕುಲದೀಪ್ ಯಾದವ್ ನಡುವೆ ಯಾರು ಅವಕಾಶ ಪಡೆಯುತ್ತಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದ್ದು ಕುಲದೀಪ್ ಯಾದವ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement