Fact Check: ಪಾಕಿಸ್ತಾನದಲ್ಲಿ Rachin Ravindra ಐಫೋನ್ ಕಳವಾಗಿದ್ದು ನಿಜವೇ..?
ಇಸ್ಲಾಮಾಬಾದ್: ತ್ರಿಕೋನ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ಪೋಫಿ ಸರಣಿಗಾಗಿ ಪಾಕಿಸ್ತಾನಕ್ಕೆ ತೆರಳಿರುವ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಚಿನ್ ರವೀಂದ್ರ ಅವರ ಐಫೋನ್ ಕಳವಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ತ್ರಿಕೋನ ಏಕದಿನ ಸರಣಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ರಚಿನ್ ರವೀಂದ್ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಲೆಗೆ ಗಾಯ ಮಾಡಿಕೊಂಡಿದ್ದರು. ಕಳಪೆ ಲೈಟಿಂಗ್ ನಿಂದಾಗಿ ಫೀಲ್ಡಿಂಗ್ ಮಾಡುವ ವೇಳೆ ಅವರ ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ರಚಿನ್ ರವೀಂದ್ರ ಚಿಕಿತ್ಸೆ ಪಡೆಯುತ್ತಿರುವಾಗ ಅವರ ಐಫೋನ್ ಕಳವಾಗಿದೆ ಎಂದು ಹೇಳಲಾಗುತ್ತಿದೆ.
ಚಿಕಿತ್ಸೆಗಾಗಿ ಲಾಹೋರ್ ಆಸ್ಪತ್ರೆಗೆ ದಾಖಲಾಗಿದ್ದ ರಚಿನ್ ರವೀಂದ್ರ ಅವರ ದುಬಾರಿ ಐಫೋನ್ ಅನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆನ್ನಲಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆದರೆ, ಈ ಸುದ್ದಿಗಳನ್ನ ಪಾಕಿಸ್ತಾನ ನಿರಾಕರಿಸಿದೆ. ಪಾಕಿಸ್ತಾನದ ಖ್ಯಾತ ಪತ್ರಕರ್ತ ಫೈಜಾನ್ ಲಖಾನಿ ಅವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ, ಅಂತಹ ಯಾವುದೇ ಘಟನೆಗಳೂ ನಡೆದಿಲ್ಲ, ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆಂದು ಹೇಳಿದ್ದಾರೆ.
ಪಾಕಿಸ್ತಾನ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದನ್ನು ಸಹಿಸಲಾಗದವರು ಅಪಪ್ರಚಾರ ನಡೆಸುತ್ತಿದ್ದಾರೆ. ರಚಿನ್ ರವೀಂದ್ರ ಅವರ ಫೋನ್ ಕಳವು ಸುದ್ದಿ ಸಂಪೂರ್ಣ ಸುಳ್ಳು, ಎಂದು ನ್ಯೂಜಿಲೆಂಡ್ ತಂಡದ ಮಾಧ್ಯಮ ವ್ಯವಸ್ಥಾಪಕರೇ ದೃಢಪಡಿಸಿದ್ದಾರೆಂದು ತಿಳಿಸಿದ್ದಾರೆ.

