
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಿಟ್ಟ ಒಂದೇ ಒಂದು ಕ್ಯಾಚ್ ನಿಂದಾಗಿ ಅಕ್ಸರ್ ಪಟೇಲ್ ಹೆಸರಿಗೆ ಬರುತ್ತಿದ್ದ ಅಪರೂಪದ ದಾಖಲೆಗಳ ದೊಡ್ಡ ಪಟ್ಟಿಯೇ ಕೈ ಬಿಟ್ಟು ಹೋಗಿದೆ.
ಹೌದು.. ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ದೊಡ್ಡ ಎಡವಟ್ಟು ಮಾಡಿದ್ದು, ಆ ಮೂಲಕ ಅಕ್ಸರ್ ಪಟೇಲ್ ಹೆಸರಿಗೆ ದಾಖಲಾಗಬೇಕಿದ್ದ ದಾಖಲೆಯ ಹ್ಯಾಟ್ರಿಕ್ ವಿಕೆಟ್ ರೆಕಾರ್ಡ್ ದಾಖಲಾಗದಂತೆ ಮಾಡಿದ್ದಾರೆ.
ರೋಹಿತ್ ಮಾಡಿದ ಒಂದೇ ಒಂದು ಎಡವಟ್ಟಿನಿಂದಾಗಿ ಅಕ್ಸರ್ ಪಟೇಲ್ ರ ಹ್ಯಾಟ್ರಿಕ್ ಕನಸು ನುಚ್ಚು ನೂರಾಗಿದ್ದು, ಇದೇ ಕಾರಣಕ್ಕೆ ನಿನ್ನೆ ರೋಹಿತ್ ಶರ್ಮಾ ಅಕ್ಸರ್ ಪಟೇಲ್ ಬಳಿ ಬಹಿರಂಗವಾಗಿಯೇ ಕ್ಷಮೆ ಯಾಚಿಸಿದ್ದಾರೆ.
ಆಗಿದ್ದೇನು?
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ಆರಂಭದಲ್ಲೇ ತತ್ತರಿಸಿತು. ಪಂದ್ಯದ ಆರಂಭದಲ್ಲಿ ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋದ ಬಾಂಗ್ಲಾದೇಶ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 35ರನ್ ಗಳ ಅಂತರದಲ್ಲಿ ಬಾಂಗ್ಲಾದೇಶ ತಂಡ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಪೈಕಿ ಮೂವರು ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದು, ಬಾಂಗ್ಲಾದೇಶಕ್ಕೆ ನುಂಗಲಾರದ ತುತ್ತಾಯಿತು.
ರೋಹಿತ್ ಮಹಾ ಪ್ರಮಾದ
ಇನ್ನು 9ನೇ ಓವರ್‌ನಲ್ಲಿ ಬೌಲಿಂಗ್ ಮಾಡಲಿಳಿದ ಅಕ್ಷರ್ ಪಟೇಲ್ ತಾವೆಸೆದ ಮೊದಲ ಓವರ್‌ನಲ್ಲೇ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಮೂರನೇ ಎಸೆತದಲ್ಲಿ ಹ್ಯಾಟ್ರಿಕ್ ಕನಸಿನೊಂದಿಗೆ ಎಸೆದ ಚೆಂಡು ಜೇಕರ್ ಅಲಿ ಬ್ಯಾಟ್ ಅಂಚನ್ನು ಸವರಿ ನೇರವಾಗಿ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಕೈಗೆ ಹೋಯಿತು. ಆದರೆ ಆತುರದಲ್ಲಿ ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲುವುದರೊಂದಿಗೆ ಅಕ್ಷರ್ ಹ್ಯಾಟ್ರಿಕ್ ವಿಕೆಟ್ ಕನಸು ನುಚ್ಚುನೂರಾಯಿತು.
ಕೈ ಮುಗಿದು ಕ್ಷಮೆ ಕೋರಿದ ರೋಹಿತ್ ಶರ್ಮಾ
ಸುಲಭದ ಕ್ಯಾಚ್ ಕೈಚೆಲ್ಲಿದ ನಾಯಕ ರೋಹಿತ್ ಶರ್ಮಾ ನೆಲಕ್ಕೆ ಕೈಬಡಿದು ತಮ್ಮ ಬೇಸರ ಹೊರಹಾಕಿದರು. ಅಂತೆಯೇ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಅವಕಾಶ ಹಾಳು ಮಾಡಿದ್ದಕ್ಕಾಗಿ ನಾಯಕ ರೋಹಿತ್ ಶರ್ಮಾ ಅಕ್ಷರ್ ಪಟೇಲ್‌ಗೆ ಕೈಮುಗಿದು ಕ್ಷಮೆಯಾಚಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಅಪರೂಪದ ದಾಖಲೆಗಳ ಕನಸು ನುಚ್ಚುನೂರು!
ಇನ್ನು ರೋಹಿತ್ ಶರ್ಮಾ ಬಿಟ್ಟ ಒಂದೇ ಒಂದು ಕ್ಯಾಚ್ ನಿಂದಾಗಿ ಅಕ್ಸರ್ ಪಟೇಲ್ ಹೆಸರಿನಲ್ಲಿ ದಾಖಲಾಗಬಹುದಾಗಿದ್ದ ಅಪರೂಪದ ದಾಖಲೆಗಳು ಮಿಸ್ ಆಗಿವೆ. ಒಂದು ವೇಳೆ ರೋಹಿತ್ ಶರ್ಮಾ ಆ ಕ್ಯಾಚ್ ಹಿಡಿದಿದ್ದರೆ, ಆಗ ಆಕ್ಸರ್ ಪಟೇಲ್ ಐಸಿಸಿ ಟೂರ್ನಿಯ ಪದಾರ್ಪಣೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಆಗಿರುತ್ತಿದ್ದರು.
ಅಂತೆಯೇ ಪುರುಷರ ಐಸಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಭಾರತದ ಮೊದಲ ಸ್ಪಿನ್ನರ್ ಎಂಬ ಕೀರ್ತಿಗೂ ಅಕ್ಸರ್ ಪಟೇಲ್ ಭಾಜನರಾಗಿರುತ್ತಿದ್ದರು. ಅಂತೆಯೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ 2ನೇ ಬೌಲರ್ ಎಂಬ ಕೀರ್ತಿಗೆ ಅಕ್ಸರ್ ಪಟೇಲ್ ಪಾತ್ರರಾಗಿರುತ್ತಿದ್ದರು. ಈ ಹಿಂದೆ 2006ರ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ವೆಸ್ಟ್ ಇಂಡೀಸ್ ಆಟಗಾರ ಜೆರೋಮ್ ಟೇಲರ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಅವರ ನಂತರ ಹ್ಯಾಟ್ರಿಕ್ ಸಾಧಿಸಿದ ಆಟಗಾರ ಎಂಬ ಕೂರ್ತಿಗೆ ಅಕ್ಸರ್ ಪಟೇಲ್ ಪಾತ್ರರಾಗಿರುತ್ತಿದ್ದರು.
ಇಷ್ಟು ಮಾತ್ರವಲ್ಲದೇ ಏಕದಿನ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಭಾರತೀಯ ಬೌಲರ್ ಎಂಬ ಕೀರ್ತಿಗೂ ಅಕ್ಸರ್ ಪಟೇಲ್ ಪಾತ್ರರಾಗಿರುತ್ತಿದ್ದರು. ಈ ಹಿಂದೆ ಕುಲದೀಪ್ ಯಾದವ್ ಈ ಸಾಧನೆ ಮಾಡಿದ್ದರು. ಅವರು 2 ಬಾರಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.
Advertisement