ICC Champions Trophy 2025: ಮಂಕಾದ ಪಾಕಿಸ್ತಾನ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು 242 ರನ್ ಗುರಿ!
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ 241 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 242 ರನ್ ಗಳ ಗುರಿ ನೀಡಿದೆ.
ದುಬೈನ ದುಬೈ ಅಂತಾರಾಷ್ಚ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮಹಮದ್ ರಿಜ್ವಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆರಂಭಿಕರಾಗಿ ಕಣಕ್ಕಿಳಿದ ಬಾಬರ್ ಆಜಂ (23 ರನ್) ಮತ್ತು ಇಮಾಮ್ ಉಲ್ ಹಕ್ (10 ರನ್) ಉತ್ತಮ ಆರಂಭ ನೀಡಿದರಾದರೂ ಇಬ್ಬರೂ ಬೇಗನೆ ಪೆವಿಲಿಯನ್ ಸೇರಿಕೊಂಡರು. ಬಾಬರ್ ಆಜಂರನ್ನು ಹಾರ್ದಿಕ್ ಪಾಂಡ್ಯಾ ಔಟ್ ಮಾಡಿದರೆ, ಇಮಾಮ್ ಉಲ್ ಹಕ್ ರನ್ನು ಅಕ್ಸರ್ ಪಟೇಲ್ ಅದ್ಭುತವಾಗಿ ರನೌಟ್ ಮಾಡಿದರು.
ಆದರೆ ಬಳಿಕ ಕ್ರೀಸ್ ಗೆ ಬಂದ ಸೌದ್ ಶಕೀಲ್ (62 ರನ್) ಮತ್ತು ನಾಯಕ ಮಹಮದ್ ರಿಜ್ವಾನ್ (46 ರನ್) ರಕ್ಷಣಾತ್ಮಕ ಆಟದ ಮೊರೆ ಹೋದರು. ಪರಿಣಾಮ ಈ ಜೋಡಿ 3ನೇ ವಿಕೆಟ್ ಗೆ 104 ರನ್ ಗಳ ಜೊತೆಯಾಟವಾಡಿದರು. ಈ ಪೈಕಿ ಸೌದ್ ಶಕೀಲ್ ಅರ್ಧಶತಕ ಸಿಡಿಸಿದರೆ, ರಿಜ್ವಾನ್ ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಳಿಕ ಸೌದ್ ಶಕೀಲ್ ಕೂಡ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.
ಈ ಇಬ್ಬರು ಔಟಾದರ ಬಳಿಕ ಪಾಕಿಸ್ತಾನ ತಂಡದಿಂದ ಅಂತಹ ಪ್ರಭಾವಶಾಲಿ ಬ್ಯಾಟಿಂಗ್ ಮೂಡಿಬರಲಿಲ್ಲ. ಕುಶ್ದಿಲ್ ಶಾ 38 ರನ್ ಗಳಿಸಿ ಪಾಕ್ ಇನ್ನಿಂಗ್ಸ್ ಗೆ ಜೀವ ತುಂಬುವ ಪ್ರಯತ್ನ ಮಾಡಿದರೂ ಅವರಿಗೆ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. ಅಂತಿಮವಾಗಿ 49.4 ಓವರ್ ನಲ್ಲಿ ಪಾಕಿಸ್ತಾನ 241 ರನ್ ಗಳಿಗೆ ಆಲೌಟ್ ಆಯಿತು.
ಭಾರತದ ಪರ ಕುಲದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯಾ 2, ಹರ್ಷಿತ್ ರಾಣಾ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ