
ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಫೆ.23) ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಐಸಿಸಿ ಪಂದ್ಯಾವಳಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ಮೊದಲ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಪಂದ್ಯಾವಳಿಯಿಂದಲೇ ಹೊರಬಿದ್ದಿದೆ. ಪಾಕಿಸ್ತಾನದ ಜೊತೆ ಬಾಂಗ್ಲಾದೇಶ ಕೂಡ ಹೊರಬಿದ್ದಿದ್ದು, ಈ ಎರಡೂ ತಂಡಗಳು ಫೆಬ್ರುವರಿ 27ರಂದು ಮುಖಾಮುಖಿಯಾಗಲಿವೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ 8 ತಂಡಗಳು ಆಡುತ್ತಿದ್ದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನ್ಯೂಜಿಲೆಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳು ಎ ಗುಂಪಿಯನಲ್ಲಿದ್ದರೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಫ್ಗಾನಿಸ್ತಾನ ಬಿ ಗುಂಪಿನಲ್ಲಿ ಆಡುತ್ತಿವೆ.
ಪಾಕಿಸ್ತಾನ 2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿತ್ತು. ಅದಾದ ಬಳಿಕ ಭಾರತ ವಿರುದ್ಧದ ಎಲ್ಲ ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿದೆ. ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಭಾರತ ವಿರುದ್ಧ ಸೋಲು ಕಂಡ ಪಾಕ್ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ವಾಗ್ದಾಳಿ ನಡೆಸಿದ್ದಾರೆ. ಭಾರತದ ವಿರುದ್ಧದ ಪಂದ್ಯದ ಸಮಯದಲ್ಲಿ ಅವರ ಆಹಾರಕ್ರಮದ ಬಗ್ಗೆಯೂ ಟೀಕಿಸಿದ್ದಾರೆ.
'ಮೊದಲ ಅಥವಾ ಎರಡನೇ ಪಾನೀಯ ವಿರಾಮ ಇರಬಹುದು. ಆಗ ಆಟಗಾರರಿಗೆಂದು ಒಂದು ಪ್ಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದ ಬಾಳೆಹಣ್ಣುಗಳನ್ನು ತುಂಬಿ ಇಡಲಾಗಿತ್ತು. ಆದರೆ, ಇತ್ನೆ ಕೆಲೆ ತೋ ಬಂದರ್ ಭೀ ನಹೀ ಖಾತೆ (ಮಂಗಗಳು ಸಹ ಅಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವುದಿಲ್ಲ) ಮತ್ತು ಅದು ಅವರ ಆಹಾರವಾಗಿದೆ. ಅದು ನಮ್ಮ ನಾಯಕ ಇಮ್ರಾನ್ ಖಾನ್ ಆಗಿದ್ದರೆ, ಅವರು ನನ್ನನ್ನು ಗದರಿಸುತ್ತಿದ್ದರು' ಎಂದು ಅಕ್ರಮ್ ಪಂದ್ಯದ ನಂತರ ಹೇಳಿದ್ದಾರೆ.
ಆಟದ ವೇಗವು ಬಹು-ಪಟ್ಟು ಹೆಚ್ಚುತ್ತಿರುವ ಈ ಸಮಯದಲ್ಲಿ ಅವರು (ಪಾಕಿಸ್ತಾನ) 'ಪ್ರಾಚೀನ ಕ್ರಿಕೆಟ್' ಆಡುತ್ತಿದ್ದಾರೆ ಎಂದು ಅಕ್ರಂ ಆರೋಪಿಸಿದರು.
'ತೀಕ್ಷ್ಣವಾದ ಕ್ರಮಗಳ ಅಗತ್ಯವಿದೆ. ನಾವು ವೈಟ್ ಬಾಲ್‌ನಲ್ಲಿ ಪ್ರಾಚೀನ ಕ್ರಿಕೆಟ್ ಆಡುತ್ತಿದ್ದೇವೆ. ಇದು ಬದಲಾಗಬೇಕು. ನಿರ್ಭೀತ ಕ್ರಿಕೆಟಿಗರನ್ನು, ಯುವಕರನ್ನು ತಂಡಕ್ಕೆ ತನ್ನಿ. ತಂಡದಲ್ಲಿ ಐದಾರು ಬದಲಾವಣೆಗಳನ್ನು ಮಾಡಬೇಕಾದರೆ, ದಯವಿಟ್ಟು ಅವುಗಳ್ನು ಮಾಡಿ. ಮುಂದಿನ ಆರು ತಿಂಗಳವರೆಗೆ ನೀವು ಸೋಲುತ್ತಲೇ ಇರುತ್ತೀರಿ. ಇದು ಸರಿ ಆದರೆ, ಈಗಿನಿಂದಲೇ 2026ರ ಟಿ20 ವಿಶ್ವಕಪ್‌ಗಾಗಿ ತಂಡವನ್ನು ಕಟ್ಟಲು ಪ್ರಾರಂಭಿಸಿ' ಎಂದು ದುಬೈನಲ್ಲಿ ಭಾರತ ವಿರುದ್ಧ ತಮ್ಮ ತಂಡದ ಸೋಲಿನ ನಂತರ 'ಡ್ರೆಸ್ಸಿಂಗ್ ರೂಂ' ಕಾರ್ಯಕ್ರಮದಲ್ಲಿ ವಾಸಿಂ ಅಕ್ರಮ್ ಹೇಳಿದರು.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದೇ ಪದೆ ವಿಫಲರಾಗುತ್ತಿರುವ ಪಾಕಿಸ್ತಾನದ ಬೌಲಿಂಗ್ ಘಟಕವನ್ನು ಟೀಕಿಸಿದ ಅವರು, 'ಸಾಕು ಸಾಕು. ಅವರನ್ನು ಸ್ಟಾರ್‌ಗಳನ್ನಾಗಿ ಮಾಡಿದ್ದೀರಿ. ಕಳೆದ ಐದು ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನದ ಬೌಲರ್‌ಗಳು 60ರ ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ, ಪ್ರತಿ ವಿಕೆಟ್‌ಗೆ 60 ರನ್ ನೀಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
'ನಮ್ಮ ಸರಾಸರಿಯು ಓಮನ್ ಮತ್ತು ಯುಎಸ್ಎಗಿಂತ ಕಳಪೆಯಾಗಿದೆ. ಏಕದಿನ ಪಂದ್ಯಗಳನ್ನು ಆಡುತ್ತಿರುವ 14 ತಂಡಗಳಲ್ಲಿ, ಪಾಕಿಸ್ತಾನದ ಬೌಲಿಂಗ್ ಸರಾಸರಿ ಎರಡನೇ ಕೆಟ್ಟ ಸರಾಸರಿಯಾಗಿದೆ' ಎಂದು ಅವರು ಹೇಳಿದರು.
Advertisement